ಬೆಳ್ತಂಗಡಿ: ನೀಟ್ ಕೋಚಿಂಗ್ ಗೆಂದು ಬಂದಿದ್ದ ವಿದ್ಯಾರ್ಥಿನಿ ಅನುಮಾಸ್ಪದವಾಗಿ ಮೃತ್ಯು
Saturday, April 29, 2023
ಬೆಳ್ತಂಗಡಿ: ನೀಟ್ ಕೋಚಿಂಗ್ ಗೆಂದು ಬೆಳ್ತಂಗಡಿಯ ಖಾಸಗಿ ಕಾಲೇಜೊಂದರ ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಿವಾಸಿ ಉಮೆ ಉಜ್ಮಾ ಎಸ್ (19) ಮೃತಪಟ್ಟ ವಿದ್ಯಾರ್ಥಿನಿ.
ಉಮೆ ಉಜ್ಮಾ ಎಸ್. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಸಮೀಪದ ಖಾಸಗಿ ಕಾಲೇಜಿನಲ್ಲಿ ಮೆಡಿಕಲ್ ಕೋರ್ಸ್ ಪ್ರವೇಶಕ್ಕೆ ನೀಟ್ ಕೋಚಿಂಗ್ ಪಡೆಯುತ್ತಿದ್ದಳು. ಆದ್ದರಿಂದ ಕಾಲೇಜು ಹಾಸ್ಟೆಲ್ ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದಳು. ಆದರೆ ಶುಕ್ರವಾರ ಬೆಳಗ್ಗೆ ಸುಮಾರು 5ಗಂಟೆ ವೇಳೆ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತಕ್ಷಣ ಆಕೆಯನ್ನು ಕಾಲೇಜು ಆಡಳಿತ ಮಂಡಳಿಯು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಆಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಉಮೆ ಉಜ್ಮಾ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ನಿವಾಸಿ ಉಜ್ಮಾ ಸನಾವುಲ್ಲಾ ಹಾಗೂ ಪರ್ವೀನ್ ದಂಪತಿಯ ಪುತ್ರಿಯಾಗಿದ್ದಾರೆ. ಪುತ್ರಿಯ ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸನಾವುಲ್ಲಾ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.