ಪ್ರಾಣಕ್ಕೇ ಕಂಟಕವಾಯ್ತು ಮದುವೆ ಉಡುಗೊರೆ: ಹೋಮ್ ಥಿಯೇಟರ್ ಸಿಡಿದು ನವವಿವಾಹಿತ ಸೇರಿ ಇಬ್ಬರು ದಾರುಣ ಸಾವು
ಕವರ್ಧಾ(ಛತ್ತೀಸ್‌ಗಢ): ಮದುವೆಯಾಗಿ ದಾಂಪತ್ಯ ಜೀವನದ ಸವಿಗನಸಿನಲ್ಲಿ ತೇಲುತ್ತಿದ್ದ ಯುವಕನೋರ್ವನ ಪ್ರಾಣಕ್ಕೆ ಮದುವೆಯ ಉಡುಗೊರೆಯೇ ಕಂಟಕವಾಗಿದೆ. ಮದುವೆಗೆಂದು ಉಡುಗೊರೆಯಾಗಿ ದೊರಕಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡ ಪರಿಣಾಮ ನವವಿವಾಹಿತ ಹಾಗೂ ಆತನ ಹಿರಿಯ ಸಹೋದರ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ.
ನವವಿವಾಹಿತ ಹೇಮೇಂದ್ರ ಮೆರಾವಿ (22) ಹಾಗೂ ಸಹೋದರ ರಾಜ್ ಕುಮಾರ್(30) ಮೃತಪಟ್ಟ ದುರ್ದೈವಿಗಳು.
ಸೋಮವಾರ ಈ ಘಟನೆ ನಡೆದಿದ್ದು, ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಇರಿಸಲಾಗಿದ್ದ ಕೋಣೆಯ ಗೋಡೆಗಳು ಹಾಗೂ ಮೇಲ್ಛಾವಣಿ ಅಂಪೂರ್ಣ ಕುಸಿದು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹೇಮೇಂದ್ರ ಮೆರಾವಿಗೆ ಎಪ್ರಿಲ್ 1 ರಂದು ವಿವಾಹವಾಗಿದೆ. ಮದುವೆಯ ವೇಳೆ ಉಡುಗೊರೆಗಳು ದೊರಕಿತ್ತು. ಸೋಮವಾರ ಹೇಮೇಂದ್ರ ಹಾಗೂ ಮನೆಮಂದಿ ಸೇರಿಕೊಂಡು ಉಡುಗೊರೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹೇಮೇಂದ್ರ ತನಗೆ ಗಿಫ್ಟ್ ಬಂದಿದ್ದ ಹೋಮ್ ಥಿಯೇಟರ್ ಸಿಸ್ಟಮ್ ವಯರ್ ಸೆಟ್ ಮಾಡಿ ಫ್ಲಗ್ ಸ್ವಿಚ್ ಹಾಕಿದ ತಕ್ಷಣ ಸ್ಪೋಟಗೊಂಡಿದೆ. ಈ ವೇಳೆ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆತನ ಸಹೋದರ ಸೇರಿ ಐವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಹೋದರ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಉಳಿದ ನಾಲ್ವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹೋಮ್ ಥಿಯೇಟರ್ ಸಿಡಿದ ತೀವ್ರತೆಗೆ ಮನೆಯ ಗೋಡೆ ಕುಸಿದು ಬಿದ್ದಿದ್ದು ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕಬೀರಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ಠಾಕೂರ್ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅಲ್ಲದೆ ಘಟನೆಗೆ ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಲ್ಲ ರೀತಿಯಲ್ಲೂ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.