ಕೊನೆಗೂ ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನಾಯತ್ ಆಲಿ ಫೈನಲ್
Thursday, April 20, 2023
ಮಂಗಳೂರು: ಭಾರಿ ಕುತೂಹಲ ಕೆರಳಿಸಿದ ಮಂಗಳೂರು ಉತ್ತರ ಕ್ಷೇತ್ರಕ್ಕೆ ಕೊನೆಗೂ ಟಿಕೆಟ್ ಘೋಷಣೆಯಾಗಿದೆ.
ಮಂಗಳೂರು ಉತ್ತರ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತ , ಉದ್ಯಮಿ ಇನಾಯತ್ ಆಲಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಂಗಳೂರು ಉತ್ತರ ಕ್ಷೇತ್ರಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವ ಮತ್ತು ಇನಾಯತ್ ಆಲಿ ತೀವ್ರ ಪೈಪೋಟಿ ನಡೆಸಿದ್ದರು. ಸಿದ್ದರಾಮಯ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಮೊಯ್ದಿನ್ ಬಾವ ಮತ್ತು ಡಿ ಕೆ ಶಿವಕುಮಾರ್ ಬಳಗದಲ್ಲಿ ಗುರುತಿಸಿಕೊಂಡಿದ್ದ ಇನಾಯತ್ ಆಲಿ ಟಿಕೆಟ್ ಗಾಗಿ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದರು.
ಇಬ್ಬರ ಪೈಪೋಟಿ ನಡುವೆ ಅಭ್ಯರ್ಥಿ ಆಯ್ಕೆ ಮಾಡುವುದು ಹೈಕಮಾಂಡ್ ಗೆ ಕಗ್ಗಂಟಾಗಿತ್ತು. ಇದೀಗ ಹೈಕಮಾಂಡ್ ಇನಾಯತ್ ಆಲಿ ಗೆ ಟಿಕೆಟ್ ಫೈನಲ್ ಮಾಡಿದೆ.
ಇನಾಯತ್ ಅಲಿ ಅವರ ಕಿರು ಪರಿಚಯ..
ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ಕಾಂಗ್ರೆಸ್ ವಿಧ್ಯಾರ್ಥಿ ಘಟಕವಾದ NSUI ಮೂಲಕ ಅಂದು ಹಲವಾರು ವಿದ್ಯಾರ್ಥಿ ಹೋರಾಟಗಳಲ್ಲಿ ಮಂಚೂಣಿಯಲ್ಲಿ ಕಾಣುತ್ತಿದ್ದ ಇನಾಯತ್ ಅವರು ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಸೇವೆಗೈದ ಕಾಂಗ್ರೆಸಿಗ.
ಮೊದಲ ಬಾರಿ 1997 ನೇ ಇಸವಿಯಲ್ಲಿ NSUI ನ ಬ್ಲಾಕ್ ಅಧ್ಯಕ್ಷರಾಗಿ ಆಯ್ಕೆಯಾದ ಇವರು ನಂತರದಲ್ಲಿ 2000ನೇ ಇಸವಿಯಲ್ಲಿ NSUI ರಾಜ್ಯ ಉಪಾಧ್ಯಕ್ಷನಾಗಿ, 2003 ರಲ್ಲಿ NSUI ರಾಷ್ಟ್ರೀಯ ಕಾರ್ಯದರ್ಶಿಯಾಗಿ, 2005 ರಲ್ಲಿ NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, 2009 ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಸ್ತುತ KPCC ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುದ್ದೆ ಮಾತ್ರವಲ್ಲದೆ NSUI ನ ರಾಜ್ಯ ಉಸ್ತುವಾರಿಯಾಗಿ ಕಾಂಗ್ರೆಸ್ ಪಕ್ಷದ ಸೇವೆಗೈಯುತ್ತಿದ್ದಾರೆ. ವೃತ್ತಿಯಲ್ಲಿ ಇನಾಯತ್ ಅಲಿ ಅವರು ಒಬ್ಬ ಉದ್ಯಮಿಯೂ ಹೌದು.