ಯುವಕರೇ ಈಕೆಯ ಟಾರ್ಗೆಟ್: ಮದುವೆಯಾಗುವುದಾಗಿ ನಂಬಿಸಿ ಲಕ್ಷ ಲಕ್ಷ ಹಣ ವಂಚಿಸಿದ ಈಕೆಯ ಚಾಲಾಕಿತನ ನೋಡಿದ್ರೆ ಹುಬ್ಬೇರಿಸ್ತೀರಾ
Tuesday, April 18, 2023
ಕೊಲ್ಲಂ: ಪ್ರಪಂಚದಲ್ಲಿ ಕೆಲವರು ಸುಲಭವಾಗಿ ದುಡ್ಡು ಮಾಡಲು ಏನೇನೋ ದಂಧೆಗಿಳಿಯುತ್ತಾರೆ. ಇವರ ಬಣ್ಣದ ಮಾತನ್ನು ನಂಬಿ ಮೋಸ ಹೋಗುವವರೂ ಅನೇಕ ಮಂದಿಯಿದ್ದಾರೆ. ಇಲ್ಲೊಬ್ಬ ಮಹಿಳೆ ಯುವಕರನ್ನು ಪರಿಚಯಿಸಿಕೊಂಡು ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ಆಕೆಯನ್ನು ಆಕೆಯ ಗೆಳೆಯನನ್ನು ಕೇರಳ ಪೊಲಿಸರು ಬಂಧಿಸಿದ್ದಾರೆ.
ಕೊಲ್ಲಂನ ಚದಯಮಂಗಳಂ ಮೂಲದ ಬಿಂದು (41) ಹಾಗೂ ತ್ರಿಸ್ಟರ್‌ನ ಇರಿಂಜಲಕುಡ ಮೂಲದ ರಣೀಶ್ (35) ಬಂಧಿತ ಆರೋಪಿಗಳು. ಈ ಪ್ರಕರಣದ ಎರಡನೇ ಆರೋಪಿ ಬಿಂದುವಿನ ಪುತ್ರ ಮಿಥುನ್ ಮೋಹನ್ ನಾಪತ್ತೆಯಾಗಿದ್ದು ಆತನಿಗಾಗಿ ಬಲೆ ಬೀಸಿದ್ದಾರೆ.
ತೆಕ್ಕೆಕ್ಕರ ವತ್ತಿಕುಲಂ ಮೂಲದ ಯುವಕ ಈ ಬಗ್ಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕರುನಾಗಪಲ್ಲಿ ಮೂಲದ ಯುವಕನ ದೂರಿನ ಮೇರೆಗೆ ಕೊಲ್ಲಂ ಸೈಬರ್ ಪೊಲೀಸರೂ ಸಹ ಬಿಂದುವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇವರಿಬ್ಬರು ಕೊಟ್ಟಾಯಂ ಮೂಲದ ಯುವಕರಿಂದ ಸುಮಾರು 10 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ಬಂಧಿಸಲಾಗಿದೆ.
ಸಾಮಾಜಿ ಜಾಲತಾಣದಲ್ಲಿ ಸಂಪರ್ಕಕ್ಕೆ ಬಂದ ಯುವಕರನ್ನು ವಂಚಿಸುವುದೇ ಇವರ ಕೆಲಸವಾಗಿತ್ತು. ಆರೋಪಿತೆ ಬಿಂದು, ವತಿಕುಲಂ ನಿವಾಸಿಗೆ ತಾನು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯಂತೆ ಸೋಗು ಹಾಕಿಕೊಂಡು ಸ್ನೇಹ ಬೆಳೆಸಿ, ಕೋರ್ಸ್ ಮುಗಿದ ಬಳಿಕ ಮದುವೆಯಾಗುವುದಾಗಿ ಭರವಸೆ ನೀಡಿದ್ದಳು. ಬಳಿಕ ವ್ಯಾಸಂಗ ಮಾಡಲು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳು. ಖಾತೆಯಲ್ಲಿ ಹಣ ಪಡೆದ ಬಳಿಕ ಆಕೆ ಯುವಕನಿಗೆ ಕರೆ ಮಾಡುವುದನ್ನು ನಿಲ್ಲಿಸಿದಳು. ಬಿಂದುವಿನ ಫೋನ್ ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಆಕೆಯ ವಿರುದ್ಧ ದೂರು ದಾಖಲಿಸಲಾಗಿತ್ತು. ಇದೀಗ ಆಕೆ ಹಾಗೂ ಆಕೆಯ ಗೆಳೆಯನ ಬಂಧನವಾಗಿದೆ.