ಮನೆಯನ್ನೇ ಮಾರಿ ಹೆಲ್ಮೆಟ್ ಖರೀದಿಸಿ ಉಚಿತವಾಗಿ ಹಂಚಿ ಜಾಗೃತಿ ಮೂಡಿಸುವ ವ್ಯಕ್ತಿ : ಭೀಕರ ಅಪಘಾತದ ಬಳಿಕ ಈ ನಿರ್ಧಾರ
Wednesday, April 12, 2023
ಬಿಹಾರ: ಹೆಲ್ಮಟ್ ಧರಿಸದೆ ದ್ವಿಚಕ್ರ ಚಲಾಯಿಸುವ ಸವಾರರಿಗೆ ಪೊಲೀಸರು ದಂಡ ವಿಧಿಸುತ್ತಿರುತ್ತಾರೆ. ಈ ಬಗ್ಗೆ ಎಷ್ಟೇ ಮುನ್ಸೂಚನೆ ನೀಡಿದರೂ ವಾಹನ ಸವಾರರು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ ಇಲ್ಲೊಬ್ಬರು ತನ್ನ ಮನೆಯನ್ನೇ ಮಾರಿ ಉಚಿತವಾಗಿ ಹೆಲ್ಮೆಟ್‌ಗಳನ್ನು ಹಂಚುತ್ತಿದ್ದಾರೆ.
ದ್ವಿಚಕ್ರ ಸವಾರರು, ಸಹಸವಾರರು ಹೆಲ್ಮೆಟ್ ಧರಿಸಿ ತಮ್ಮ ಜೀವಕ್ಕೆ ತಾವೆ ಹೊಣೆಗಾರರು ಎಂಬುದನ್ನು ಮರೆಯಬಾರದು. ಕಳೆದ ತಿಂಗಳು ಆಗ್ರಾ-ಲಖನೌ ಎಕ್ಸ್‌ಪ್ರೆಸ್ ವೇಯಲ್ಲಿ ವಾಹನ ಸವಾರರಿಗೆ ಬಿಹಾರ ಮೂಲದ ರಾಘವೇಂದ್ರ ಕುಮಾರ್ ಉಚಿತ ಹೆಲ್ಮಟ್ ನೀಡುವ ವಿಡಿಯೋ ವೈರಲ್ ಆಗಿತ್ತು. ಹೆಲ್ಮೆಟ್ ಧರಿಸದೇ ವಾಹನ ಸವಾರಿ ಮಾಡುವವರಿಗೆ ಅವರು ಉಚಿತವಾಗಿ ಹೆಲ್ಮಟ್ ನೀಡುತ್ತಿದ್ದಾರೆ.
ಒಂಬತ್ತು ವರ್ಷಗಳ ಹಿಂದೆ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತವೊಂದು ನಡೆದಿತ್ತು. ಈ ಅಪಘಾತದಲ್ಲಿ ತನ್ನಿಬ್ಬರು ಪ್ರಾಣಸ್ನೇಹಿತರನ್ನು ರಾಘವೇಂದ್ರ ಕುಮಾರ್ ಕಳೆದುಕೊಂಡಿದ್ದರು. ಇದರಲ್ಲಿ ಒಬ್ಬರು ರೂಮ್‌ಮೇಟ್ ಮತ್ತೊಬ್ಬರು ಆಪ್ತ ಸ್ನೇಹಿತ, ಈ ಘಟನೆಯಿಂದ ರಾಘವೇಂದ್ರ ಕುಮಾರ್ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಅವರು ಉಚಿತ ಹೆಲ್ಮೆಟ್‌ಗಳನ್ನು ವಿತರಿಸಲು ನಿರ್ಧರಿಸಿದ್ದಾರೆ.
ದೇಶಾದ್ಯಂತ 56,000ಕ್ಕೂ ಅಧಿಕ ಹೆಲ್ಮೆಟ್‌ಗಳನ್ನು ವಿತರಣೆ ಮಾಡಿರುವ ರಾಘವೇಂದ್ರ ಕುಮಾರ್ ಅವರು, ಸದ್ಯ ಹಣದ ಕೊರತೆ ಎದುರಿಸುತ್ತಿದ್ದಾರೆ. ಹೆಲ್ಮೆಟ್‌ಗಳನ್ನು ಖರೀದಿಸುವ ಸಲುವಾಗಿ ಗ್ರೇಟರ್ ನೋಯ್ಡಾದಲ್ಲಿನ ತಮ್ಮ ಅಪಾರ್ಟೆಂಟ್ ಅನ್ನು ಕೂಡ ಅವರು ಮಾರಾಟ ಮಾಡಿದ್ದಾರೆ. ಜೊತೆಗೆ ತಮ್ಮ ಪತ್ನಿಯ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಆದರೆ ಇದೀಗ ಅವರ ಬಳಿ ಏನೂ ಇಲ್ಲದ ಕಾರಣ ತಮ್ಮ ಗ್ರಾಮಕ್ಕೆ ಹಿಂತಿರುಗಿ ಪುತ್ರನನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ.
“ನನ್ನನ್ನು ಹುಚ್ಚ ಎಂದು ಕರೆದರೂ ಚಿಂತೆಯಿಲ್ಲ. ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆ. ಮುಂದಿನ ಕೆಲವು ವಾರಗಳಲ್ಲಿ, ನನಗೆ ಹೆಲ್ಮೆಟ್ ಖರೀದಿಸುವ ವೆಚ್ಚ ಹೆಚ್ಚಾಗಲಿದೆ. ಹಾಗಾಗಿ ನಗರದಲ್ಲಿ ಜೀವಿಸುವುದು ಕಷ್ಟವಾಗಲಿದ್ದು, ಬಿಹಾರದ ಕೈಮೂರ್ ಜಿಲ್ಲೆಯ ನನ್ನ ಗ್ರಾಮಕ್ಕೆ ಹಿಂತಿರುಗುತ್ತೇನೆ. ಯಾವುದೇ ಕಾರಣಕ್ಕೂ ನಾನು ಹೆಲ್ಮಟ್ ಖರೀದಿಸುವುದನ್ನು ಬಿಡುವುದಿಲ್ಲ. ನಿಮ್ಮ ಕೈಯಲ್ಲಾದರೆ ಜೀವಗಳನ್ನು ಉಳಿಸಿ,” ಎಂದು ಕುಮಾರ್ ಹೇಳಿದ್ದಾರೆ.