ನಳಿನ್ ಕಟೀಲ್‌ಗೆ ಠಕ್ಕರ್ ನೀಡಲು ಕರಾವಳಿಯಲ್ಲಿ ವೇದಿಕೆ ಸಿದ್ಧ !
ನಳಿನ್ ಕಟೀಲ್‌ಗೆ ಠಕ್ಕರ್ ನೀಡಲು ಕರಾವಳಿಯಲ್ಲಿ ವೇದಿಕೆ ಸಿದ್ಧ !
ತಮ್ಮ ನಾಟಕೀಯ ಹಾಗೂ ಕುಹಕದ ಮಾತುಗಳಿಂದಲೇ ಎದುರಾಳಿಗಳನ್ನು ಕಟ್ಟಿ ಹಾಕಬಲ್ಲ ಚಾಣಾಕ್ಷ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಹಣೆಯಲು ಕರಾವಳಿಯ ಚುನಾವಣಾ ಕಣ ಸಜ್ಜಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿಯೊಳಗೆ ಆಂತರಿಕ ಬಂಡಾಯದ ಸ್ವರ ಕೇಳಿಬಂದಿತ್ತು.
ಪಾಲೇಮಾರ್ ಬೆನ್ನಲ್ಲೇ ಸತ್ಯಜಿತ್ ಸುರತ್ಕಲ್ ಕೂಡ ಬಂಡಾಯದ ತುಪ್ಪಕ್ಕೆ ಬೆಂಕಿ ಸುರಿದಿದ್ದರು.
ಆದರೆ, ಸಂತೋಷದ ಜೊತೆಗೆ ಅದೃಷ್ಟವೂ ನಳಿನ್ ಬೆಂಬಲಕ್ಕೆ ಇತ್ತು. ತಾವು ಕಣಕ್ಕಿಳಿಸಿದ ಬಹುತೇಕ ಎಲ್ಲ ಅಭ್ಯರ್ಥಿಗಳು ಭರ್ಜರಿ ಅಂತರದಿಂದ ಗೆಲುವು ಸಾಧಿಸಿ ವಿಧಾನಸಭೆಗೆ ಪ್ರವೇಶಿಸಿದರು. ಕರಾವಳಿಯ ಬಹುತೇಕ ಶಾಸಕರು ಹೊಸಬರೇ ಆಗಿದ್ದು ಮತ್ತೊಂದು ವಿಶೇಷವಾಗಿತ್ತು.
ಆದರೆ, ಈ ಬಾರಿ ಎಲ್ಲವೂ ಅಷ್ಟೊಂದು ಸುಲಭವಲ್ಲ. ರಾಜ್ಯಾಧ್ಯಕ್ಷರ ತವರೂರಿನಲ್ಲಿ ಸ್ಥಳೀಯ ಸಂಸದರಿಗೆ ಪಕ್ಷದೊಳಗೇ ಅಷ್ಟೊಂದು ಬೆಂಬಲ, ಮರ್ಯಾದೆ ಸಿಗುತ್ತಿಲ್ಲ. ಪ್ರವೀಣ್ ನೆಟ್ಟಾರು ಹತ್ಯೆ ಸಂದರ್ಭದಲ್ಲಿ ನಳಿನ್ ವಿಳಂಬ ಭೇಟಿಗೆ ಕಾರ್ಯಕರ್ತರು ಸಿಟ್ಟಾಗಿ ಕಾರನ್ನೇ ಅಲ್ಲಾಡಿಸಿ ಗದ್ದಲ ಎಬ್ಬಿಸಿ ತಮ್ಮ ವಿರೋಧದ ಸ್ಪಷ್ಟ ಸಂದೇಶ ಕಳುಹಿಸಿದ್ದರು.
ಅದರ ಭಾಗವಾಗಿಯೇ ಈ ಬಾರಿ ಪುತ್ತೂರಿನಲ್ಲಿ ಬಂಡಾಯದ ಪುತ್ತಿಲ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಅಧಿಕೃತ ಅಭ್ಯರ್ಥಿ ವಿರುದ್ಧ ತೊಡೆ ತಟ್ಟಿದ್ದಾರೆ. ಇನ್ನು ಕೈಪಾಳಯದಲ್ಲಿ ಬಿಜೆಪಿಯಿಂದ ಪಕ್ಷಾಂತರಗೊಂಡ ಉದ್ಯಮಿ ಕೋಡಿಂಬಾಡಿ ಅಶೋಕ್ ರೈ ಕಣಕ್ಕಿಳಿದಿದ್ದಾರೆ. ದಾನ-ಧರ್ಮದಲ್ಲಿ ಎತ್ತಿದ ಕೈ ಎನಿಸಿರುವ ಅಶೋಕ್ ರೈ ಅವರಿಗೆ ತನ್ನದೇ ಆದ ಸಾವಿರಾರು ಅಭಿಮಾನಿಗಳಿದ್ದಾರೆ.
ಸಂಘ ಪರಿವಾರದ ಉತ್ಸಾಹಿ ನಾಯಕ ಅರುಣ ಕುಮಾರ್ ಪುತ್ತಿಲ ನಾಮಪತ್ರ ಸಂದರ್ಭದಲ್ಲಿ ಸಾವಿರಾರು ಮಂದಿ ಸೇರಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಕೇವಲ ವಾಟ್ಸ್ಯಾಪ್ ಸಂದೇಶಕ್ಕೆ ಸಾವಿರಾರು ಮಂದಿಯನ್ನು ಸೇರಿಸಿದ್ದ ಪುತ್ತಿಲ ತಮ್ಮ ತಾಕತ್ತನ್ನು ನಾಮಪತ್ರದ ದಿನ ತೋರಿಸಿದ್ದಾರೆ. ಈ ಶಕ್ತಿ ಪ್ರದರ್ಶನದ ಹಿಂದೆ ಸಂಘ ಪರಿವಾರದ ಹಿರಿಯ ತಲೆಗಳು ಇವೆ ಎನ್ನುವ ಗುಸು ಗುಸು ಎಲ್ಲೆಡೆ ಕೇಳಿಬರುತ್ತಿದೆ.
ಅದೇ ನಾಯಕರು ಬಂಟ್ವಾಳದಲ್ಲಿ ರಮಾನಾಥ ರೈ ಬಗ್ಗೆ ಮೌನ ವಹಿಸಿರುವುದು ಮಾತ್ರವಲ್ಲದೆ, ಅವರ ಬಗ್ಗೆ ಮೃಧು ಧೋರಣೆ ತಾಳಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಇನ್ನು ಕಾರ್ಕಳದಲ್ಲೂ ಒಂದು ಕಾಲದ ಭಜರಂಗಿ ನಾಯಕ ಪ್ರಮೋದ್ ಮುತಾಲಿಕ್ ಪರ ಅಲ್ಪಸ್ವಲ್ಪ ಜನಬೆಂಬಲ ಕಾಣುತ್ತಿದೆ.
ಇದೆಲ್ಲವನ್ನು ಗಮನಿಸಿದರೆ ಆಂತರಿಕವಾಗಿ ನಳಿನ್ ಅವರನ್ನು ರಾಜಕೀಯವಾಗಿ ಹಣಿಯಲು ಚುನಾವಣೆ ಎಂಬ ವೇದಿಕೆ ಸಜ್ಜಾಗಿರುವಂತೆ ಕಾಣುತ್ತಿದೆ.