ಸುಳ್ಯ: ದಿ.ಪ್ರವೀಣ್ ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಭೇಟಿ
Sunday, April 30, 2023
ಸುಳ್ಯ: ಮತಾಂಧರಿಂದ ಹತ್ಯೆಗೀಡಾಗಿದ್ದ ಬಿಜೆಪಿ ಯುವಮೋರ್ಚ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ನೀಡಿದರು.
ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿರುವ ದಿ.ಪ್ರವೀಣ್ ನೆಟ್ಟಾರು ಅವರಿಗೆ ನೂತನವಾಗಿ ನಿರ್ಮಿಸಲಾದ ಮನೆಗೆ ನಡ್ಡಾ ಭೇಟಿ ನೀಡಿದರು. ಈ ವೇಳೆ ಪ್ರವೀಣ್ ಹೆತ್ತವರು ಹಾಗೂ ಪತ್ನಿ ಅವರಿಗೆ ಹೂ ಗುಚ್ಛ ನೀಡಿ ಶಾಲು ಹೊದಿಸಿ ಸ್ವಾಗತಿಸಿದರು. ಮನೆಗೆ ಭೇಟಿ ನೀಡಿ ಪ್ರವೀಣ್ ಪೋಷಕರು ಹಾಗೂ ಪತ್ನಿಯೊಂದಿಗೆ ಮಾತುಕತೆ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ನಿರ್ಮಾಣವಾದ ಈ ಮನೆ ಎ.27ರಂದು ಗೃಹ ಪ್ರವೇಶವಾಗಿತ್ತು. ಈ ವೇಳೆ ಜೆ.ಪಿ.ನಡ್ಡಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದರು.
ಈ ವೇಳೆ ಜೆ.ಪಿ.ನಡ್ಡಾ ಮಾತನಾಡಿ, ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದೇನೆ. ಎಸ್ ಡಿಪಿಐ ಮತ್ತು ಪಿಎಫ್ಐ ಈ ಹತ್ಯೆಯ ಹಿಂದಿದ್ದು, ಇದು ಖಂಡನೀಯ. ಘಟನೆ ಬಳಿಕ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಲಾಯ್ತು. ಈ ಪ್ರಕರಣವನ್ನು ನಮ್ಮ ಸರ್ಕಾರ ಎನ್ಐಎ ತನಿಖೆ ಮಾಡುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆಗೆ ನ್ಯಾಯ ಸಿಗೋವರೆಗೂ ವಿರಮಿಸಲ್ಲ. ಅವರ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ. ಇಂಥಹ ಮಾನಸಿಕತೆಯ ವಿರುದ್ಧ ನಮ್ಮ ಹೋರಾಟ ನಿರ್ಣಾಯಕ ಘಟ್ಟದವರೆಗೂ ಮುಂದುವರೆಯಲಿದೆ. ಅವರ ಕುಟುಂಬ ಸದಸ್ಯರೊಂದಿಗೆ ನಮ್ಮ ಸರ್ಕಾರ ಇರಲಿದೆ ಎಂದರು.