ಅಪ್ರಾಪ್ತ ವಿದ್ಯಾರ್ಥಿನಿಯನ್ನು ವಿವಾಹವಾದ ಕಾಮುಕ ಶಿಕ್ಷಕ ಪೊಕ್ಸೊ ಕಾಯ್ದೆಯಡಿ ಅರೆಸ್ಟ್
Sunday, April 2, 2023
ಆಂಧ್ರಪ್ರದೇಶ: ಪರೀಕ್ಷೆ ಬರೆಯುತ್ತಿದ್ದ ಅಪ್ರಾಪ್ತೆಯನ್ನು ಕರೆದೊಯ್ದು ಕಾಮುಕ ಶಿಕ್ಷಕನೋರ್ವನು ಮದುವೆಯಾಗಿದ್ದು, ಇದೀಗ ಈತನನ್ನು ಪೊಕ್ಸೊ ಕಾಯ್ದೆಯಡಿಯಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶಿಕ್ಷಕ ಚಲಪತಿ(33) ಬಂಧಿತ ಆರೋಪಿ.
ಆರೋಪಿಯು ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಅಪ್ರಾಪ್ತೆಗೆ ಅಂತಿಮ ಪರೀಕ್ಷೆಯಿದ್ದು, ಅದು ಮುಗಿದ ಬಳಿಕ ಆರೋಪಿ ಚಲಪತಿ ಸುಳ್ಳು ಹೇಳಿ ಆಕೆಯನ್ನು ತಿರುಪತಿಗೆ ಕರೆದೊಯ್ದಿದ್ದಾನೆ. ಆ ಬಳಿಕ ಅವರಿಬ್ಬರೂ ಅಲ್ಲಿರುವ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಬಳಿಕ ಚಲಪತಿಯ ವರ್ತನೆಯಲ್ಲಿ ಬದಲಾವಣೆಯಾಗಿದ್ದನ್ನು ಆಕೆ ಗಮನಿಸಿದ್ದಾಳೆ. ಆದ್ದರಿಂದ ಆಕೆ ಈ ಬಗ್ಗೆ ತನ್ನ ಪೋಷಕರಿಲ್ಲಿ ತಿಳಿಸಿದ್ದಾಳೆ.
ತಕ್ಷಣ ಮನೆಯವರು ಪೊಲೀಸ್ ದೂರು ದಾಖಲಿಸಿದ್ದು, ಪೊಲೀಸರು ಕಾಮುಕ ಶಿಕ್ಷಕನನ್ನು ಬಂಧಿಸಿ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಗುರುವಾರ ರಾತ್ರಿ ತನ್ನ ಹೆತ್ತವರೊಂದಿಗೆ ಅಪ್ರಾಪ್ತ ಬಾಲಕಿ ಗಂಗವರಂ ಪೊಲೀಸ್ ಠಾಣೆಗೆ ಬಂದು ಎಫ್‌ಐಆರ್ ದಾಖಲಿಸಿದ್ದಾಳೆ. ಶಿಕ್ಷಕ ಚಲಪತಿ ಈಗಾಗಲೇ ಮದುವೆಯಾಗಿದ್ದು, ಓರ್ವ ಪುತ್ರಿಯಿದ್ದಾಳೆ. ಆದರೂ ಆತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತೆಯನ್ನು ಮದುವೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.