
ರಾಪಿಡೊ ಬೈಕ್ ಚಾಲಕನಿಂದ ಲೈಂಗಿಕ ಕಿರುಕುಳ : ಸಂಚಾರದಲ್ಲಿದ್ದಾಗಲೇ ಬೈಕ್ ನಿಂದ ಜಿಗಿದ ಯುವತಿ
Wednesday, April 26, 2023
ಬೆಂಗಳೂರು: ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೋರ್ವನ ಲೈಂಗಿಕ ಕಿರುಕುಳದಿಂದ ಬೆದರಿದ ಯುವತಿಯೊಬ್ಬಳು ಬೈಕ್‌ನಿಂದ ಜಿಗಿದು ಗಾಯಗೊಂಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಆತಂಕಕಾರಿ ಘಟನೆ ಎ. 21ರಂದು ನಡೆದಿದೆ. ಸಂತ್ರಸ್ತ ಯುವತಿ ಬೈಕ್‌ನಿಂದ ಜಿಗಿದಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿ ರಾಪಿಡೋ ಬೈಕ್ ಚಾಲಕನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ದೀಪಕ್ ರಾವ್ (27) ಬಂಧಿತ ಆರೋಪಿ.
ಯಲಹಂಕ ಉಪನಗರದಿಂದ ಇಂದಿರಾನಗರಕ್ಕೆ ತೆರಳಲು ಈ ಯುವತಿ ರಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಳು. ಎ.21ರಂದು ಸುಮಾರು 11.10ರ ಸುಮಾರಿಗೆ ಬೈಕ್ ಸವಾರ ಸ್ಥಳಕ್ಕೆ ಆಗಮಿಸಿದ್ದಾನೆ. ಬಳಿಕ ಒಟಿಪಿ ಪಡೆಯುವ ನೆಪದಲ್ಲಿ ಸಂತ್ರಸ್ತೆಯ ಮೊಬೈಲ್ ಅನ್ನು ಸವಾರ ಕಸಿದುಕೊಂಡಿದ್ದಾನೆ. ಬಳಿಕ ಬೈಕ್ ಪ್ರಯಾಣ ಆರಂಭಿಸುತ್ತಿದ್ದಂತೆ ಆಕೆಯೊಂದಿಗೆ ಆತ ಅನುಚಿತವಾಗಿ ವರ್ತಿಸತೊಡಗಿದ್ದಾನೆ.
ಇಂದಿರಾ ನಗರಕ್ಕೆ ಆಗಮಿಸುವ ಮಾರ್ಗ ಮಧ್ಯೆ ಆತ ದೊಡ್ಡಬಳ್ಳಾಪುರದಡೆಗೆ ಮಾರ್ಗ ಬದಲಿಸಿದ್ದಾನೆ. ಇದರಿಂದ ಅನುಮಾನಗೊಂಡು ಯುವತಿ ಪ್ರಶ್ನೆ ಮಾಡಿದ್ದಕ್ಕೆ ಏನೂ ಉತ್ತರ ನೀಡಿದ ಸವಾರ ಬೈಕ್ ಅನ್ನು ವೇಗವಾಗಿ ಓಡಿಸಲು ಆರಂಭಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ನಾಗೇನಹಳ್ಳಿ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ವೇಗದಲ್ಲಿರುವ ಬೈಕ್ ನಿಂದಲೇ ಜಿಗಿದಿದ್ದಾಳೆ. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ರಕ್ಷಣೆಗೆ ಧಾವಿಸಿದಾಗ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಯುವತಿ ಸ್ಥಳೀಯರ ಮೊಬೈಲ್ ಪಡೆದು ಸ್ನೇಹಿತರಿಗೆ ಕರೆ ಮಾಡಿದ್ದಾಳೆ. ಆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾಳೆ.
ಸಂತ್ರಸ್ತೆ ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಬೈಕ್‌ನಿಂದ ಜಿಗಿದ ಪರಿಣಾಮ ಆಕೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಯುವತಿ ನೀಡಿದ ದೂರಿನನ್ವಯ ಆರೋಪಿ ಬೈಕ್ ಟ್ಯಾಕ್ಸಿ ಸವಾರ ದೀಪಕ್ ರಾವ್ ಎಂಬಾತನನ್ನು ಬಂಧಿಸಲಾಗಿದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದೀಪಕ್ ವಿರುದ್ಧ ಲೈಂಗಿಕ ಕಿರುಕುಳ, ಅಪಹರಣ, ಹಲ್ಲೆ ಪ್ರಕರಣ ದಾಖಲಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.