ಮಂಗಳೂರಿನಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ ಭರ್ಜರಿ ರೋಡ್ ಶೋ- ಕುಡ್ಲದಲ್ಲಿ ಕೇಸರಿ ಕಲರವ
Saturday, April 29, 2023
ಮಂಗಳೂರು: ಬಿಜೆಪಿ ಚಾಣಾಕ್ಯ ಅಮಿತ್ ಶಾ ಇಂದು ಮಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪರ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಬೈಂದೂರಿನಲ್ಲಿ ಸಭೆ ನಡೆಸಿ ಹೆಲಿಕಪ್ಟಾರ್ ಮೂಲಕ ಮೇರಿಹಿಲ್ ಹೆಲಿಪ್ಯಾಡ್ ಗೆ ಆಗಮಿಸಿದ ಅಮಿತ್ ಶಾ ರಸ್ತೆ ಮಾರ್ಗವಾಗಿ 6.25ರ ಸುಮಾರಿಗೆ ಪುರಭವನಕ್ಕೆ ಆಗಮಿಸಿದರು. ಸಂಜೆ 6.30ಕ್ಕೆ ಆರಂಭಗೊಂಡ ರೋಡ್ ಶೋ ವಾಹನದಲ್ಲಿ ಅಮಿತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಸಾಥ್ ನೀಡಿದರು. ಪುರಭವನದಿಂದ ನವಭಾರತ ಸರ್ಕಲ್ ವರೆಗೆ ನಡೆದ ಸುಮಾರು ಅರ್ಧ ಕಿ.ಮೀ.ವರೆಗಿನ ರೋಡ್ ಶೋದಲ್ಲಿ 10ಸಾವಿರಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದ ಸಾವಿರಾರು ಮಂದಿ ಜನರು ರೋಡ್ ಶೋ ವೀಕ್ಷಿಸಿ ಮೊಬೈಲ್ ನಲ್ಲಿ ಚಿತ್ರೀಕರಿಸಿತು. ಈ ವೇಳೆ ಅಮಿತ್ ಶಾ ಜನರತ್ತ ಕೈ ಬೀಸಿ, ವಂದಿಸಿ ಜನರಲ್ಲಿ ಮತಯಾಚನೆ ಮಾಡಿದರು.
ಪುರಭವನದಿಂದ ಹೊರಟ ರೋಡ್ ಶೋ ಕ್ಲಾಕ್ ಟವರ್ ಮೂಲಕ ತೆರಳಿ ಹಂಪನಕಟ್ಟೆ ಸಿಗ್ನಲ್ ಗೆ ಆಗಮಿಸಿ ಕೆ.ಎಸ್.ರಾವ್ ರಸ್ತೆ ಮಾರ್ಗವಾಗಿ ನವಭಾರತ ಸರ್ಕಲ್ ನತ್ತ ಅರ್ಧ ಕಿ.ಮೀ.ವರೆಗೆ ಸಾಗಿತು. ರೋಡ್ ಶೋ 7.35ರ ವೇಳೆಗೆ ಅಂತ್ಯಗೊಂಡಿತು. ರೋಡ್ ಶೋಗೆ ಹುಲಿವೇಷ, ನಾಸಿಕ್ ಬ್ಯಾಂಡ್, ಚಂಡೆ, ಕಲ್ಲಡ್ಕ ಗೊಂಬೆ ಮೆರುಗು ನೀಡಿತು. ಬಿಜೆಪಿ ಬಾವುಟದೊಂದಿಗೆ ತುಳುನಾಡ ಧ್ವಜವೂ ರೋಡ್ ಶೋನಲ್ಲಿ ಕಾಣಿಸಿಕೊಂಡಿತು. ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ರೋಡ್ ಶೋನಲ್ಲಿ ಕೇಸರಿ ಶಾಲು ಬೀಸಿ ಸಂಭ್ರಮಪಟ್ಟರು. ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಫೋಟೋಗಳು ರಾರಾಜಿಸಿತು. 'ವೇದಣ್ಣನಿಗೆ ಜೈಕಾರ ಹಾಕಿ' ಎಂಬ ಹಾಡಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ರೋಡ್ ಶೋಗೆ ಮಂಗಳೂರು ಪೊಲೀಸ್, ಸಶಸ್ತ್ರ ಮೀಸಲು ಪಡೆ, ಕೆಎಸ್ಆರ್ ಪಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು. ರೋಡ್ ಶೋ ಕೊನೆಯಲ್ಲಿ ಅಮಿತ್ ಶಾಗೆ ಕ್ರೇನ್ ಮೂಲಕ ಬೃಹತ್ ಗಾತ್ರದ ಮಾಲಾರ್ಪಣೆ ಮಾಡಲಾಯಿತು. ಆ ಬಳಿಕ ಅವರು ಓಶಿಯನ್ ಪರ್ಲ್ ಹೊಟೇಲ್ ಕಡೆಗೆ ತೆರಳಿದರು. ಅಲ್ಲಿ ದ.ಕ.ಜಿಲ್ಲಾ ಬಿಜೆಪಿ ಮುಖಂಡರ ಸಭೆಯನ್ನು ನಡೆಸಲಿದ್ದಾರೆ.