ಗುರುವಾಯನಕೆರೆಯಲ್ಲಿ ಕಾಲೇಜು ವಿದ್ಯಾರ್ಥಿನಿ ಅನುಮಾನಸ್ಪದ ಸಾವು
Saturday, April 29, 2023
ಗುರುವಾಯನಕೆರೆ: ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ಲಾಂಗ್ ಟರ್ಮ್ ನೀಟ್ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌ಗೆ ಬಂದಿದ್ದ ವಿದ್ಯಾರ್ಥಿನಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಏ.28 ರಂದು ಗುರುವಾಯನಕೆರೆಯಲ್ಲಿರುವ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ವಿದ್ಯಾನಗರ ಎರಡನೇ ಅಡ್ಡ ರಸ್ತೆಯ ನಿವಾಸಿ ಸನಾವುಲ್ಲ ಮತ್ತು ಸೀಮಾ ಪರ್ವಿನ್ ದಂಪತಿಗಳ ಪುತ್ರಿ ಉಮೆ ಉಜ್ಯಾ ಎಸ್. (19 ವ.) ಎಂಬವರು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ಎಕ್ಸೆಲ್ ವಿದ್ಯಾ ಸಂಸ್ಥೆಯಲ್ಲಿ ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ಲಾಂಗ್ ಟರ್ಮ್ ನೀಟ್ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಎಕ್ಸೆಲ್ ಕಾಲೇಜಿನ ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದರು.
ವಿದ್ಯಾರ್ಥಿನಿಯು ಏ. 28 ರಂದು ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಆಕೆ ಉಳಿದುಕೊಂಡಿದ್ದ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆ ಆಗಿದ್ದರು.
ತಕ್ಷಣ ಅವರನ್ನು ಆಡಳಿತ ಮಂಡಳಿಯು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಬೆಳಗ್ಗೆ ಗಂಟೆಗೆ ವಿದ್ಯಾರ್ಥಿನಿ ಉಮೆ ಉಸ್ಮಾರವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯು ಪರೀಕ್ಷೆಯ ವಿಚಾರದಲ್ಲಿ ಭಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಕಟ್ಟಡದಿಂದ ಜಾರಿ ಬಿದ್ದು ಸಾವನ್ನಪ್ಪಿದರೋ ಎಂಬ ಬಗ್ಗೆ ಅನುಮಾನಗಳಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ವಿದ್ಯಾರ್ಥಿನಿಯ ತಂದೆ ಬೆಳ್ತಂಗಡಿ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.