ಕಷ್ಟದ ದಿನಗಳಲ್ಲಿ ನನ್ನೊಂದಿಗೆ ನಿಂತ ಬೊಮ್ಮಾಯಿ ಮಾಮನ ಪರ ಈಗ ನಾನು ನಿಲ್ಲುತ್ತೇನೆ : ಕಿಚ್ಚ ಸುದೀಪ್
Wednesday, April 5, 2023
ಬೆಂಗಳೂರು: ಸಿನಿಮಾ ರಂಗದ ಕಷ್ಟದ ದಿನಗಳಲ್ಲಿ ಪ್ರೀತಿಯಿಂದ ಬೊಮ್ಮಾಯಿ ಮಾಮ ಎಂದು ಕರೆಯುವ ಸಿಎಂ ಬಸವರಾಜ ಬೊಮ್ಮಾಯಿಯವರು ನನ್ನೊಂದಿಗೆ ನಿಂತಿದ್ದರು. ಈಗ ನಾನು ಅವರ ಪರ ಇದ್ದೇನೆಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿದ ಅವರು, ಇಲ್ಲಿ ನನ್ನ ನಿಲುವು ಎಂದೇನು ಇಲ್ಲ. ಇಲ್ಲಿ ರಾಜಕೀಯವೇನು ಇಲ್ಲ. ಕಷ್ಟದ ದಿನಗಳಲ್ಲಿ ಬೊಮ್ಮಾಯಿ ಮಾಮ ನನಗೆ ಬೆಂಗಾವಲಾಗಿ ನಿಂತಿದ್ದರು. ಆದ್ದರಿಂದ ಇಂದು ಅವರ ಪರ ನಾನು ನಿಲ್ಲುತ್ತೇನೆ ಎಂದರು.
ಈ ವೇಳೆ ಸುದ್ದಿಗಾರರು ಬಿಜೆಪಿಯ ತತ್ವ ಸಿದ್ಧಾಂತಗಳನ್ನು ನೀವು ಒಪ್ಪುತ್ತೀರೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಮನೆಯಲ್ಲಿ ತಂದೆಯಿದ್ದಲ್ಲಿ ಅವರು ಹೇಳಿದಂತೆ ಕೇಳುತ್ತೇವೆ. ಅವರಿಗೆ ಸಹಾಯ ಬೇಕೆಂದರೆ ನಾವು ಅವರ ಪರ ನಿಲ್ಲೋದು ಕರ್ತವ್ಯ. ಒಬ್ಬ ವ್ಯಕ್ತಿಯ ಪರವಾಗಿ ನಿಲ್ಲುತ್ತೇವೆ ಅಂದರೆ ಪಕ್ಷದ ಪರವಾಗಿ ನಿಲ್ಲುತ್ತೇವೆ ಎಂದರ್ಥ ಎಂದರು.
ಇದೇ ಸಂದರ್ಭ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದ ಸಿಎಂ ಬೊಮ್ಮಾಯಿ, ಸುದೀಪ್ ಯಾವ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ನಮ್ಮ ಹಾಗೂ ಅವರ ಸಂಬಂಧವನ್ನು ಗೌರವಿಸಿ ನಮ್ಮ ಪರವಾಗಿ ನಿಲ್ಲುತ್ತಿದ್ದಾರೆ. ಮೊದಲಿನಿಂದಲೂ ಅವರ ಜತೆ ಒಳ್ಳೆಯ ಸಂಬಂಧ ಇರುವುದರಿಂದ ಎರಡು ಬಾರಿ ಮಾತಾಡಿದ್ದೆ. ನಿಮಗೋಸ್ಕರ ಸಿದ್ಧನಿದ್ದೇನೆ ಎಂದಿದ್ದಾರೆ. ಪಕ್ಷದ ಪರ ಪ್ರಚಾರ ಮಾಡೇನೆ ಎಂದಿದ್ದಾರೆ ಎಂದು ಹೇಳಿದರು.
ನಾನು ಎಲ್ಲರಿಗೂ ಕ್ಯಾಂಪೇನ್ ಮಾಡಲು ಆಗೋದಿಲ್ಲ. ನಾನು ಬಂದಿರೋದು ಬೊಮ್ಮಾಯಿ ಮಾಮನಿಗೋಸ್ಕರ. ಅವರು ಹೇಳಿದರೆ, ಅವಶ್ಯಕತೆಯಿದ್ದರೆ ಇತರರ ಪರವಾಗಿಯೂ ಕ್ಯಾಂಪೇನ್ ಮಾಡುತ್ತೇನೆ. ನಿಮ್ಮ ಮೇಲೆ ಇಡಿ, ಐಟಿ ಒತ್ತಡವೇನಾದಾರೂ ಹಾಕಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಹಾಗೇನು ಇಲ್ಲ. ನಮ್ಮ ಮನೆಗೆ ಈಗಾಗಲೇ ಇಡಿ, ಐಟಿ ಬಂದು ಹೋಗಿದ್ದಾರೆ. ಅವರಿಗೆ ಮನೆಯಲ್ಲಿ ಏನೂ ಸಿಗಲಿಲ್ಲ ಎನ್ನುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸುದೀಪ್, ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ. ನಮ್ಮ ದೇಶದ ಕಾನೂನು ಬಲಿಷ್ಠವಾಗಿದೆ. ಆರೋಪಗಳನ್ನು ನ್ಯಾಯಾಲಯ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಬಳಿಕ ಸಿಎಂ ಬೊಮ್ಮಾಯಿಯವರು ಮಾತನಾಡಿ, ಸುದೀಪ್ ಪ್ರಚಾರದ ಬಗ್ಗೆ ಕುಳಿತು ಪ್ಲ್ಯಾನ್ ಮಾಡುತ್ತೇವೆ. ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇವೆ. ಸುದೀಪ್ ನಮ್ಮ ಜತೆ ಸೇರಿರೋದು ತುಂಬಾ ಖುಷಿಯಾಗಿದೆ. ನಮ್ಮ ಪಕ್ಷಕ್ಕೆ ಹೊಸ ಶಕ್ತಿ ಬಂದಂತಾಗಿದೆ. ಈ ನಿಲುವು ತೆಗೆದುಕೊಳ್ಳಲು ಅವರು ಎಷ್ಟು ಚಿಂತನೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಬಿಜೆಪಿಗೆ ದೊಡ್ಡ ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿದರು.