ಮಂಗಳೂರು: ಕಡುಪಾಪಿ ಪತಿಗೆ ಅತ್ತಿಗೆಯೊಂದಿಗೆಯೇ ಅಕ್ರಮ ಸಂಬಂಧ - ಮನನೊಂದ ನವವಿವಾಹಿತೆ ಆತ್ಮಹತ್ಯೆಗೆ ಶರಣು
Tuesday, April 25, 2023
ಬೆಳ್ತಂಗಡಿ: ಅವರಿಬ್ಬರದ್ದು 22 ವರ್ಷಗಳ ಸ್ನೇಹ, 15 ವರ್ಷಗಳ ಪ್ರೀತಿ. ಎರಡೂ ಮನೆಯವರ ಸಮ್ಮತಿಯಲ್ಲಿ ಇಬ್ಬರ ವಿವಾಹವೂ ನೆರವೇರಿತು. ಆದರೆ ಹನಿಮೂನ್ ಗೆ ಹೋಗಿದ್ದ ವೇಳೆ ಪತ್ನಿಗೆ ತನ್ನ ಪತಿಯ ಅಸಲಿ ವಿಚಾರ ಆತನ ಮೊಬೈಲ್ ಗೆ ಬಂದ ಒಂದು ಮೆಸೇಜ್ ನಿಂದ ತಿಳಿದೇ ಬಿಟ್ಟಿತು. ಆಕೆ ದಾಂಪತ್ಯ ಜೀವನ ನಡೆಸಲು ಕಟ್ಟಿದ್ದ ಕನಸಿನ ಗೋಪುರವೇ ಕುಸಿದು ಬಿದ್ದಂತಾಗಿದೆ. ಆ ಬಳಿಕ ನಡೆದದ್ದೇ ಘೋರ ದುರಂತ.
ಬೆಳ್ತಂಗಡಿ ನಿವಾಸಿಗಳಾಗಿ ನೆರೆಹೊರೆಯವರಾದ ಕೌಸಲ್ಯಾ ಹಾಗೂ ಸುಕೇಶ್ ಇಬ್ಬರದ್ದು ಬರೋಬ್ಬರಿ 22ವರ್ಷದ ಸ್ನೇಹ. ಈ ನಡುವೆ ಇಬ್ಬರೂ ಕಳೆದ 15 ವರ್ಷಗಳಿಂದ ಪ್ರೀತಿಯ ಬಲೆಗೆ ಬಿದ್ದಿತ್ತು. ಐದು ತಿಂಗಳ ಹಿಂದೆಯಷ್ಟೇ ಈ ಜೋಡಿ ಕುಟುಂಬದ ಹಿರಿಯರ ಸಮ್ಮತಿಯೊಂದಿಗೆ ಮದುವೆಯೂ ಆಗಿತ್ತು. ಎಲ್ಲರ ದೃಷ್ಟಿಯೇ ಬೀಳುವಂತಿತ್ತು ಈ ಜೋಡಿ. ಆದರೆ ಹನಿಮೂನ್ ಗೆ ಹೋದಾಗ ಆತನ ಮೊಬೈಲ್ ಗೆ ಬಂದ ಮೆಸೇಜ್ ನೋಡಿ ಕೌಸಲ್ಯಾ ಕನಸಿನ ಗೋಪುರ ಕುಸಿದೇ ಹೋಯಿತು. ಅಷ್ಟಕ್ಕೂ ಆ ಮೆಸೇಜ್ ಬಂದಿದ್ದು ಸುಕೇಶ್ ದೊಡ್ಡಪ್ಪನ ಮಗನ ಪತ್ನಿಯಿಂದ ಅಂದರೆ ಆತನ ಅತ್ತಿಗೆಯಿಂದ.
ಹಾಗಾದರೆ ಆ ಮೆಸೇಜ್ ನಲ್ಲೇನಿತ್ತು ಅಂಥ ಯಾರಾದರೂ ಅಂದ್ಕೊಬಹುದು. ಹೌದು ಆ ಒಂದು ಮೆಸೇಜ್ ನಲ್ಲಿ ಕಡುಪಾಪಿ ಸುಕೇಶ್ ಗೆ ಮಾತೃಸಮಾನಳಾದ ಅತ್ತಿಗೆಯೊಂದಿಗೆ ಸಂಬಂಧವಿತ್ತು ಎಂಬುದನ್ನು ಬಯಲು ಮಾಡಿತ್ತು. ಆಕೆ ತುಳು ಭಾಷೆಯಲ್ಲಿ ಬರೆದ ಪ್ರತೀ ಮೆಸೇಜ್ ನಲ್ಲೂ ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು. ಇದು ತಿಳಿಯುತ್ತಿದ್ದಂತೆ ಕೌಸಲ್ಯ ಪತಿಯ ಅಸಲಿ ಮುಖವನ್ನು ನೋಡಬೇಕೆಂದು ಆತನ ಮೊಬೈಲ್ ಬ್ಯಾಕ್ಅಪ್ ಅನ್ನು ತನ್ನ ಮೊಬೈಲ್ ಗೆ ಬರುವಂತೆ ಮಾಡಿದ್ದಳು. ಆಗ ಪತಿ ಹಾಗೂ ಆತನ ಅತ್ತಿಗೆಯ ಮೋಸದಾಟ ಕೌಸಲ್ಯ ಮುಂದೆ ಸಂಪೂರ್ಣ ಬಟಾಬಯಲಾಯ್ತು. ಇದನ್ನು ಪತಿಯ ಮನೆಯಲ್ಲಿ ಕೌಸಲ್ಯಾ ತಿಳಿಸಿದರೂ, ಸುಕೇಶ್ ತಂದೆ 'ನೀನು ಬಂದ ಮೇಲೆಯೇ ತಮ್ಮ ಮನೆಯಲ್ಲಿ ಸಮಸ್ಯೆ ಸೃಷ್ಟಿಯಾಗಿರೋದು' ಎಂದು ಕೌಸಲ್ಯ ಮೇಲೆಯೇ ರೇಗಾಡಿದ್ದರು.
ಇದರಿಂದ ಮನನೊಂದ ಕೌಸಲ್ಯ ಎ.20ರಂದು ಕೆಲಸಕ್ಕೆ ಹೋಗುತ್ತೇನೆಂದು ತೆರಳಿ ಫರ್ಟಿಲೈಸರ್ ಶಾಪ್ ಗೆ ಹೋಗಿ ಕಳೆನಾಶಕ ಖರೀದಿಸಿದ್ದಾಳೆ. ದಾರಿಯಲ್ಲಿಯೇ ಅದನ್ನು ಸೇವಿಸುತ್ತಾ ಬಂದಿದ್ದಾಳೆ. ತಾಯಿ ಮನೆಗೆ ಬರುತ್ತಲೇ ಬಳಲಿದ್ದ ಕೌಸಲ್ಯ ತಾನು ವಿಷಸೇವಿಸಿದ್ದಾಗಿ ಹೇಳಿದ್ದಾಳೆ. ಗಾಬರಿಗೊಂಡ ಮನೆಯವರು ತಕ್ಷಣ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಕೌಸಲ್ಯ ಎಪ್ರಿಲ್ 24ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇದೀಗ ಕೌಸಲ್ಯ ಮನೆಯವರು ಸುಕೇಶ್ ಮೇಲೆ ಹಿಡಿಶಾಪ ಹಾಕುತ್ತಿದ್ದಾಳೆ. ಇತ್ತ ಆರೋಪಿ ಪತಿ ನಾಪತ್ತೆಯಾಗಿದ್ದಾನೆ. ಇದೀಗ ಬೆಳ್ತಂಗಡಿ ಠಾಣೆಯಲ್ಲಿ ಸುಕೇಶ್, ಆತನ ತಂದೆ, ಅತ್ತಿಗೆ ಮೇಲೆ ದೂರು ದಾಖಲಾಗಿದೆ. ಆದರೆ ಕೌಸಲ್ಯ ಮಾತ್ರ ಯಾರ ಕೈಗೂ ಸಿಗದಷ್ಟು ದೂರ ಪ್ರಯಾಣಿಸಿ ಆಗಿದೆ.