ಪತಿ ಚಾಕಲೇಟ್ ತಂದುಕೊಟ್ಟಿಲ್ಲವೆಂದು ನೇಣಿಗೆ ಶರಣಾದ ಪತ್ನಿ
Friday, April 7, 2023
ಬೆಂಗಳೂರು: ಪತಿ ಚಾಕೊಲೇಟ್ ತಂದು ಕೊಟ್ಟಿಲ್ಲವೆಂದು ಕೋಪಗೊಂಡ ಪತ್ನಿ, ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಂದಿನಿ(24) ಆತ್ಮಹತ್ಯೆಗೆ ಶರಣಾದ ವಿವಾಹಿತೆ.
ನಂದಿನಿಯವರ ಪತಿ ಗೌತಮ್ ಸೆಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಎಂದಿನಂತೆ ಕೆಲಸಕ್ಕೆ ಹೊರಡುವ ಸಂದರ್ಭ ಚಾಕೊಲೇಟ್ ತಂದು ಕೊಡುವಂತೆ ಪತ್ನಿ ನಂದಿನಿ ಕೇಳಿಕೊಂಡಿದ್ದಾರೆ. ಆದರೆ ಗೌತಮ್ ಅವರು ಕೆಲಸದ ಒತ್ತಡದಲ್ಲಿ ಮರೆತು ತಮ್ಮ ಪಾಡಿಗೆ ಕೆಲಸಕ್ಕೆ ಮಾಡಿದ್ದಾರೆ. ಮಧ್ಯಾಹ್ನವಾದರೂ ಚಾಕೊಲೇಟ್ ತಂದು ಕೊಟ್ಟಿಲ್ಲವೆಂದು ನಂದಿನಿ ಪತಿಗೆ ಕರೆ ಮಾಡಿದ್ದಾರೆ. ಆದರೆ ಗೌತಮ್ ಕರೆ ಸ್ವೀಕರಿಸಿಲ್ಲ. ಪರಿಣಾಮ ಸಿಟ್ಟಾದ ನಂದಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಗೆ ಬಂದು ಗೌತಮ್ ನೋಡಿದಾಗ ನಂದಿನಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ. ತಕ್ಷಣ ಅವರು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ನಂದಿನಿ ಸಾವನ್ನಪ್ಪಿದ್ದರು. ಆರು ವರ್ಷದ ಹಿಂದೆ ಗೌತಮ್ ಹಾಗೂ ನಂದಿನಿ ಪ್ರೀತಿಸಿ ವಿವಾಹವಾಗಿದ್ದರು. ಈ ದಂಪತಿಗೆ 4 ಮತ್ತು 2 ವರ್ಷದ ಇಬ್ಬರು ಮಕ್ಕಳಿದ್ದಾರೆ. ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.