Sulya:-ಕೋಳಿ ಪದಾರ್ಥದ ಜಗಳ ಕೊಲೆಯಲ್ಲಿ ಅಂತ್ಯ.!
Wednesday, April 5, 2023
ಸುಳ್ಯ
ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಮೊಗ್ರ ಏರಣ ಗುಡ್ಡೆ ಎಂಬಲ್ಲಿ ಮಂಗಳವಾರ ತಡ ರಾತ್ರಿ ಕೋಳಿ ಪದಾರ್ಥಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಎಂಬವರಿಗೂ ಅವರ ಮಗ ಶಿವರಾಮ ಎಂಬವರಿಗೂ ಮಂಗಳವಾರ ತಡರಾತ್ರಿ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಯಿತು. ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಆಕ್ಷೇಪಿಸಿ ಆತ ಮಾತನಾಡತೊಡಗಿದಾಗ ತಂದೆ ಶೀನರಿಗೂ ಆತನಿಗೂ ಜಗಳ ಆರಂಭವಾಯಿತು. ಕೋಪಗೊಂಡ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದರೆನ್ನಲಾಗಿದೆ. ಬಲವಾದ ಏಟು ಬಿದ್ದು ತಲೆ ಒಡೆದ ಪರಿಣಾವಾಗಿ ಶಿವರಾಮ(35) ಸ್ಥಳದಲ್ಲೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ವಿಷಯ ತಿಳಿದು ಸುಬ್ರಹ್ಮಣ್ಯ ಪೋಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನನನ್ನು ಬಂಧಿಸಿದ್ದಾರೆ. ಶಿವರಾಮರ ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳಿದ್ದಾರೆ.