ಮಂಗಳೂರು: ಹಳಿಗೆ ಬಿದ್ದ ಮರ ಕೆಂಪು ವಸ್ತ್ರ ಹಿಡಿದು ಸಂಭಾವ್ಯ ಅಪಾಯ ತಪ್ಪಿಸಿದ ಮಹಿಳೆ
ಮಂಗಳೂರು: ರೈಲು ಹಳಿ ಮೇಲೆ ಮರ ಬಿದ್ದಿರುವುದನ್ನು ಗಮನಿಸಿದ 70ರ ಮಹಿಳೆಯೊಬ್ಬರು ತಕ್ಷಣ ಕೆಂಪುಬಟ್ಟೆ ಪ್ರದರ್ಶಿಸಿ ರೈಲು ನಿಲ್ಲಿಸಿ ಸಂಭಾವ್ಯ ಅಪಘಾತವೊಂದನ್ನು ತಪ್ಪಿಸಿ ಸಮಯಪ್ರಜ್ಞೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪಡೀಲ್ – ಜೋಕಟ್ಟೆ ಮಧ್ಯದ ರೈಲು ಹಳಿಯ ಪಚ್ಚನಾಡಿ ಸಮೀಪ ಮಂದಾರದಲ್ಲಿ ಈ ಘಟನೆ ಮಾ.21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕುಡುಪು ಆಯರ ಮನೆ ನಿವಾಸಿ ಚಂದ್ರಾವತಿ(70) ಎಂಬವರೇ ಈ ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದ ಮಹಿಳೆ.
ಮಾ. 21ರಂದು ಮಧ್ಯಾಹ್ನ ಸುಮಾರು 2.10ರ ಸುಮಾರಿನ ವೇಳೆಗೆ ರೈಲು ಹಳಿಯ ಮೇಲೆಯೇ ಮರವೊಂದು ಬಿದ್ದಿದೆ. ಅದೇ ಸಮಯಕ್ಕೆ ಮಂಗಳೂರಿನಿಂದ ಮುಂಬಯಿಗೆ ಸಂಚರಿಸುವ ಮತ್ಸ್ಯಗಂಧ ರೈಲು ಇದೇ ರೈಲು ಹಳಿಯ ಮೇಲೆ ಹೋಗುತ್ತದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಂದ್ರಾವತಿಯವರು ಏನು ಮಾಡಬೇಕೆಂದು ತೋಚದೆ, ಮನೆಯಲ್ಲಿದ್ದ ಕೆಂಪು ಬಟ್ಟೆಯನ್ನು ತಂದು ರೈಲು ಬರುವ ಸಮಯಕ್ಕೆ ಪ್ರದರ್ಶಿಸಿ ಲೋಕೋಪೈಲೆಟ್ ಗಮನ ಸೆಳೆದಿದ್ದಾರೆ. ಅಪಾಯವನ್ನು ಅರಿತ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿ ರೈಲನ್ನು ನಿಲ್ಲಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಬಳಿಕ ಸ್ಥಳೀಯರು ಹಾಗೂ ರೈಲ್ವೇ ಇಲಾಖೆಯವರು ಸೇರಿ ಮರವನ್ನು ತೆರವು ಮಾಡಿದರು.
ಚಂದ್ರಾವತಿಯವರು ಈ ಬಗ್ಗೆ ಮಾತನಾಡಿ, “ಆಗಷ್ಟೇ ಊಟ ಮಾಡಿ ಮನೆಯೊಳಗಿಂದ ಅಂಗಳಕ್ಕೆ ಬಂದಿದ್ದೆ. ಅದೇ ವೇಳೆ ರೈಲು ಹಳಿಯ ಮೇಲೆ ದೊಡ್ಡ ಮರವೊಂದು ಮುರಿದು ಬಿದ್ದಿದೆ. ವಿಪರ್ಯಾಸವೆಂದರೆ ಅದೇ ವೇಳೆಗೆ ಮುಂಬಯಿ ರೈಲು ಸಂಚರಿಸುವ ಬಗ್ಗೆ ಗೊತ್ತಿತ್ತು. ಏನು ಮಾಡಬೇಕು ಎಂದು ತಕ್ಷಣಕ್ಕೆ ಗೊತ್ತಾಗದೆ ಯಾರಿಗಾದರೂ ಕರೆ ಮಾಡಿ ತಿಳಿಸುವ ಎಂದು ಮನೆಗೆ ಬಂದೆ. ಆಗ ರೈಲಿನ ಹಾರ್ನ್ ಕೇಳಿಸಿತು. ಆಗ ದೇವರ ದಯೆಯಿಂದ ಅಲ್ಲೇ ಕೆಂಪು ಬಟ್ಟೆ ಕಂಡಿತು. ಅದನ್ನೇ ಹಿಡಿದು ಹಳಿಯ ಬಳಿಗೆ ಓಡಿದೆ. ನನಗೆ ಹೃದಯದ ಆಪರೇಷನ್ ಆಗಿತ್ತು. ಆದರೂ ಲೆಕ್ಕಿಸದೆ ಓಡಿ ಬಂದೆ ಎಂದವರು ಹೇಳಿದ್ದಾರೆ.
ಎಲ್ಲರ ಸಹಕಾರದಿಂದ ಮರ ತೆರವು ನಡೆಸಿ ಸುಗಮ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸುಮಾರು ಅರ್ಧ ತಾಸು ರೈಲು ನಿಲುಗಡೆಯಾಗಿತ್ತು.