ರೆಸ್ಟೋರೆಂಟ್ ಪ್ರವೇಶಕ್ಕೆ ನಟಿ ಉರ್ಫಿ ಜಾವೇದ್ ಗೆ ನಿರಾಕರಿಸಿದ ಮ್ಯಾನೇಜರ್ - ಇದು ಪಬ್ಲಿಸಿಟಿ ಗಿಮಿಕ್ ನೆಟ್ಟಿಗರು
Wednesday, April 26, 2023
ಮುಂಬೈ: ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ತಮ್ಮ ಬಟ್ಟೆಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಇವರು ವಿಭಿನ್ನ, ವಿಚಿತ್ರ ಶೈಲಿಯ ಬಟ್ಟೆಗಳನ್ನು ತೊಡುವ ಮೂಲಕ ಜನಪ್ರಿಯರಾಗಿದ್ದಾರೆ. ಅವರ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅವರ ಚಿತ್ರ - ವಿಚಿತ್ರ ಬಟ್ಟೆಗಳನ್ನು ತೊಟ್ಟು ತೆಗಿದಿರುವ ಫೋಟೊಗಳ ಭಂಡಾರವೇ ಇದೆ. ಇದೀಗ ಅವರು ಮತ್ತೊಂದು ವಿಚಾರದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ತನ್ನನ್ನು ರೆಸ್ಟೋರೆಂಟ್ ಒಳಗೆ ಪ್ರವೇಶಿಸಲು ಅವಕಾಶ ನೀಡಿಲ್ಲವೆಂದು ಸ್ವತಃ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟೇಬಲ್ ಬುಕ್ ಮಾಡಿದ್ದರೂ ತನಗೆ ಮುಂಬೈ ರೆಸ್ಟೋರೆಂಟ್ ವೊಂದು ಪ್ರವೇಶ ನಿರಾಕರಿಸಿದೆ. ಅವರ ಉಡುಪಿನ ಆಯ್ಕೆಯ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಆದ್ದರಿಂದ ಉರ್ಫಿ ಜಾವೇದ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ರೆಸ್ಟೋರೆಂಟ್ ನಡೆಯನ್ನು ಪ್ರಶ್ನಿಸಿದ್ದಾರೆ. ಆದರೆ ವಿಡಿಯೋದಲ್ಲಿ, ರೆಸ್ಟೋರೆಂಟ್ ಮ್ಯಾನೇಜರ್ ನಟಿಯನ್ನು ಶಾಂತಗೊಳಿಸಲು ಯತ್ನಿಸುತ್ತಿದ್ದಾರೆ. ರೆಸ್ಟೋರೆಂಟ್ ಫುಲ್ ಆಗಿದೆ ಎಂದು ತಿಳಿಸಲು ಪ್ರಯತ್ನಿಸಿದ್ದಾರೆ. ನಟಿ ಮ್ಯಾನೇಜರ್‌ಗೆ ಮಾತನಾಡಲು ಅವಕಾಶ ಮಾಡಿಕೊಡದೇ ಕೋಪಗೊಂಡು ತಮ್ಮ ಮಾತನ್ನು ಮುಂದುವರಿಸಿದ್ದಾರೆ. ತನ್ನ ಉಡುಪಿನ ಶೈಲಿಯಿಂದಲೇ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉರ್ಫಿ ಜಾವೇದ್, ಇದು ನಿಜವಾಗಿಯೂ ಆಧುನಿಕ ಮುಂಬೈಯೋ?, ರೆಸ್ಟೋರೆಂಟ್ ಒಂದು ನನ್ನನ್ನು ಒಳಗೆ ಬಿಡಲು ನಿರಾಕರಿಸಿದೆ. ನನ್ನ ಫ್ಯಾಷನ್ ಆಯ್ಕೆಗಳನ್ನು ಯಾರೂ ಇಷ್ಟಪಡಬೇಕಾಗಿಲ್ಲ. ಆದರೆ ಅದಕ್ಕಾಗಿ ನನಗೆ ದಂಡ ವಿಧಿಸುವುದು ಸರಿಯಲ್ಲ. ನೆಪ ಕೊಡಬೇಡಿ, ನಾನು ಕಿರಿಕಿರಿಗೊಂಡಿದ್ದೇನೆ. ದಯವಿಟ್ಟು ಇದನ್ನು ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ. ರೆಸ್ಟೋರೆಂಟ್‌ನ ವಿಡಿಯೋ ಶೇರ್ ಮಾಡಿದ್ದು, ಉರ್ಫಿ ಜಾವೇದ್ ಅಧಿಕೃತ ಇನ್‌ಸ್ಟಾ ಖಾತೆಯಲ್ಲಿ ನೀವು ಇದನ್ನು ಗಮನಿಸಬಹುದು.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನೇಕ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಕಾಮೆಂಟ್ ವಿಭಾಗಕ್ಕೆ ಸೇರಿದರು. 'ಈ ನಾಟಕವು ಪ್ರಚಾರಕ್ಕಾಗಿ ಎಂದು ಆರೋಪಿಸಿ, ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಹೀಗೆ ಬರೆದಿದ್ದಾರೆ - 110% ಸ್ಕ್ರಿಪ್ಟ್, ಮಾನೇಜರ್ ನಟನೆ ಸಹ ಕೆಟ್ಟದಾಗಿದೆ. ಮಾನೇಜರ್ ಆದರೂ ಉತ್ತಮವಾಗಿ ನಟಿಸಬಹುದಿತ್ತು' ಎಂದು ತಿಳಿಸಿದ್ದಾರೆ. 'ಇದು ನಿಜ ಎಂದು ಭಾವಿಸುವವರಿಗಾಗಿ 1 ಸೆಕೆಂಡ್ ಮೌನ' ಎಂದು ಇನ್ನೋರ್ವ ಸಾಮಾಜಿಕ ಜಾಲತಾಣದ ಬಳಕೆದಾರರು ತಿಳಿಸಿದ್ದಾರೆ. 'ಅನಗತ್ಯ ನಾಟಕ! ಉರ್ಫಿ ಜಾವೇದ್ ಎಂಬ ಕಾರಣಕ್ಕೆ ಏಕೆ ಮಹತ್ವ ನೀಡುತ್ತಾರೋ?' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೆಲ್ಲಾ ಪಬ್ಲಿಸಿಟಿ ಗಿಮಿಕ್ ಎಂದು ಓರ್ವರು ಕಾಮೆಂಟ್ ಮಾಡಿದ್ದಾರೆ.