ರೇಪ್ ಕೇಸ್ ನಲ್ಲಿ ಜಾಮೀನು ಪಡೆದು ಹೊರ ಬಂದ ರೀಲ್ಸ್ ಸ್ಟಾರ್ ನಿಂದ ಹಾಡಹಗಲೇ ನಡೆಯಿತು ಘೋರ ಕೃತ್ಯ
Wednesday, April 12, 2023
ತಿರುವನಂತಪುರ: ರೇಪ್ ಕೇಸ್ ನಲ್ಲಿ ಅರೆಸ್ಟ್ ಆಗಿ ಕೆಲ ದಿನಗಳ ಕಾಲ ಜೈಲು ವಾಸ ಅನುಭವಿಸಿ, ಜಾಮೀನು ಮೇಲೆ ಹೊರಬಂದಿರುವ ಕೇರಳದ ಇನ್‌ಸ್ಟಾಗ್ರಾಂ ಹಾಗೂ ಹಾಗೂ ರೀಲ್ಸ್ ಸ್ಟಾರ್ ವಿನೀತ್, ಇದೀಗ ಮತ್ತೊಮ್ಮೆ ಅರೆಸ್ಟ್ ಆಗಿದ್ದಾನೆ. ಹಾಡಹಗಲಲ್ಲೇ ಪೆಟ್ರೋಲ್ ಬಂಕ್ ಮ್ಯಾನೇಜರ್‌ನಿಂದ ಬರೋಬ್ಬರಿ 2.5 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ಈತ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವೆಲಾಲ್ಲೂರ್ ನಿವಾಸಿಗಳಾದ ವಿನೀತ್ (26) ಮತ್ತು ಆತನ ಸ್ನೇಹಿತ ಜೀತು (22) ಕೇರಳ ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೀಸೆಕಾರ ವಿನೀತ್ ಎಂದು ಖ್ಯಾತಿ ಪಡೆದಿರುವ ಬಂಧಿತ ವಿನೀತ್ ಮತ್ತು ಜೀತುವನ್ನು ಮಗಳಪುರಂ ಪೊಲೀಸರು ಬಂಧಿದ್ದಾರೆ. ವಿನೀತ್ ಮೇಲೆ ಸುಮಾರು 10ಕ್ಕೂ ಅಧಿಕ ಕಳವಹ ಪ್ರಕರಣಗಳಿವೆ. ಈ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಥಾಂಪನೂರ್ ಪೊಲೀಸರಿಂದ ಬಂಧನವಾಗಿದ್ದ.
ಮಾರ್ಚ್ 23 ರಂದು ನಿಫಿ ಪ್ಯೂಯೆಲ್ಸ್ ಪೆಟ್ರೋಲ್ ಬಂಕ್ ಮ್ಯಾನೇಜರ್ ಬ್ಯಾಂಕ್‌ಗೆ ಡೆಪಾಸಿಟ್ ಇಡಬೇಕಾದ ಮೊತ್ತದೊಂದಿಗೆ ಪಲ್ಲಿಪುರಂ ಶಾಖೆಗೆ ಬರುತ್ತಿದ್ದ ವೇಳೆ ವಿನೀತ್ ಮತ್ತು ಜೀತು ಕನಿಯಾಪುರಂನಲ್ಲಿ ಅವರಲ್ಲಿದ್ದ ಹಣವ್ನು ದೋಚಿದ್ದರು. ಕಳವು ಮಾಡಿದ್ದ ದ್ವಿಚಕ್ರ ವಾಹನದಲ್ಲಿ ವಿನೀತ್ ಮತ್ತು ಆತನ ಸಹಚರರು ಹಣ ದೋಚಿದ್ದಾರೆ. ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿರುವುದು ಪತ್ತೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ತನಿಖೆ ನಡೆಸಿದ್ದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸುಲಿಗೆ ಮಾಡಿದ ಬಳಿಕ ಜಿಲ್ಲೆ ಬಿಟ್ಟು ಹಲವೆಡೆ ಲಾಡ್ಜ್‌ಗಳಲ್ಲಿ ಆರೋಪಿಗಳು ತಂಗಿದ್ದರು. ಪೊಲೀಸರು ಆರೋಪಿಯನ್ನು ತ್ರಿಶೂರ್‌ನ ಲಾಡ್ಜ್‌ನಲ್ಲಿ ಬಂಧಿಸಿದ್ದಾರೆ.
ವಿನೀತ್ ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕವೇ ಕೇರಳದಲ್ಲಿ ಖ್ಯಾತಿ ಪಡೆದುಕೊಂಡಿದ್ದಾನೆ. ವಿಡಿಯೋ ಮೂಲಕ ಹುಡುಗಿಯರನ್ನು ಮರಳು ಮಾಡುವುದೇ ಈತನ ಕೆಲಸವಾಗಿತ್ತು. ತಾನು ಪೊಲೀಸ್ ಕೆಲಸಕ್ಕೆ ರಾಜೀನಾಮೆ ನೀಡಿ, ಚಾನೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ಹುಡುಗಿಯರನ್ನು ನಂಬಿಸುತ್ತಿದ್ದ. ಆದರೆ, ಆತ ಓದಿರುವುದು ದ್ವಿತೀಯ ಪಿಯುಸಿ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ರೀಲ್ಸ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯನಾಗಿರುತ್ತಿದ್ದ ವಿನೀತ್, ಜಾಲತಾಣದ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಪರಿಚಯ ಪ್ರೇಮಕ್ಕೆ ತಿರುಗುವಂತೆ ಮಾಡುತ್ತಿದ್ದ. ಬಳಿಕ ಯುವತಿಯರ ಮೇಲೆ ಅನುಮಾನ ಪಡುತ್ತಿದ್ದ. ನಿನಗೆ ಬೇರೊಬ್ಬನೊಂದಿಗೆ ಸಂಬಂಧವಿದೆ ಎಂದು ಕತೆ ಕಟ್ಟುತ್ತಿದ್ದ. ಆತನನ್ನು ನಂಬಿಸಲು ಆತನ ಬಲೆಗೆ ಬೀಳುವ ಹುಡುಗಿಯರು ತಮ್ಮ ಈಮೇಲ್ ಮತ್ತು ಇನ್‌ಸ್ಟಾಗ್ರಾಂ ಐಡಿ ಹಾಗೂ ಪಾಸ್‌ವರ್ಡ್ ಅನ್ನು ಆತನಿಗೆ ನೀಡುತ್ತಿದ್ದರು. ಆ ಬಳಿಕ ಹುಡುಗಿಯರ ಇನ್ ಸ್ಟಾಗ್ರಾಂ ಖಾತೆಗಳನ್ನು ವಿನೀತ್ ನಿರ್ವಹಿಸುತ್ತಿದ್ದ. ತನ್ನ ಸೂಚನೆಗಳನ್ನು ಅನುಸರಿಸಲು ಹುಡುಗಿಯರನ್ನು ಒತ್ತಾಯಿಸುತ್ತಿದ್ದ.
ಹೊಸ ಕಾರು ಖರೀದಿ ಮಾಡಿದ್ದೇನೆ. ಒಂದು ಡ್ರೈವ್ ಹೋಗೋಣ ನನಗೆ ಕಂಪೆನಿ ಕೊಡುವಂತೆ ಆಹ್ವಾನಿಸುತ್ತಿದ್ದ. ಆತನ ಮಾತನ್ನು ನಂಬಿ ಬರುವ ವಿದ್ಯಾರ್ಥಿನಿಯರನ್ನು ತಿರುವನಂತಪುರದಲ್ಲಿರುವ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ನಡೆದ ಘಟನೆಯನ್ನು ತನ್ನ ಸ್ನೇಹಿತೆಯೊಬ್ಬಳಿಗೆ ಹೇಳಿದ ಬಳಿಕ ಆಕೆ ದೂರು ದಾಖಲಿಸಿದಳು. ತಕ್ಷಣ ತನಿಖೆ ಆರಂಭಿಸಿದ ಪೊಲೀಸರು ವಿನೀತ್‌ನನ್ನು ಬಂಧಿಸಿದ್ದರು. ಬಳಿಕ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಆತ ಹೊರಬಂದಿದ್ದ.