ಇಬ್ಬರು ಯುವತಿಯರನ್ನು ಬೈಕ್ ನಲ್ಲಿ ಕೂರಿಸಿ ವ್ಹೀಲಿಂಗ್ ಮಾಡಿ ಪೊಲೀಸ್ ಅತಿಥಿಯಾದ ಯುವಕ
Monday, April 3, 2023
ಮುಂಬೈ: ಇಬ್ಬರು ಯುವತಿಯರನ್ನು ಬೈಕ್ ನಲ್ಲಿ ಕೂರಿಸಿಕೊಂಡು ಯುವಕನೊಬ್ಬ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಇದೀಗ ಪೊಲೀಸ್ ಅತಿಥಿಯಾಗಿದ್ದಾನೆ. ಈತ ವ್ಹೀಲಿಂಗ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ತಪ್ಪಿತಸ್ಥ ಯುವಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿ, ಬಂಧಿತ ಯುವಕ 24 ವರ್ಷದವನಾಗಿದ್ದಾನೆ. ಈತ ಓರ್ವ ಯುವತಿಯನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು, ಮತ್ತೋರ್ವಳನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ರಸ್ತೆಯಲ್ಲಿ ಅಪಾಯಕಾರಿಯಾಗಿ ಬೈಕ್ ವ್ಹೀಲಿಂಗ್ ಮಾಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಆರೋಪಿ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ಮೊದಲು ಆರೋಪಿಯ ವಿರುದ್ಧ ಆ್ಯಂಟೋಪ್ ಹಿಲ್, ವಡಾಲಾ ಟಿಟಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 308 ಮತ್ತು ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ವೈರಲ್ ಆಗಿದ್ದ ವಿಡಿಯೋದಲ್ಲಿ ಮೂವರೂ ಹೆಲ್ಮೆಟ್ ಧರಿಸದೆ ವ್ಹೀಲಿಂಗ್ ಮಾಡಿದ್ದಾರೆ. ಈ ರೀತಿ ಅಪಾಯಕಾರಿಯಾಗಿ ಸ್ಟಂಟ್ ಮಾಡಲು ಹೋಗಿ ಸ್ವಲ್ಪ ಎಡವಟ್ಟು ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ಮೂವರು ಪ್ರಾಣವನ್ನು, ಅಪಾಯವನ್ನು ಲೆಕ್ಕಿಸದೆ ಸ್ಟಂಟ್ ಮಾಡಿದ್ದಾರೆ. ಇವರು ಸ್ಟಂಟ್ ಮಾಡುವುದನ್ನು ಯಾರೋ ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ PotholeWarriors ಎಂಬ ಟ್ವಿಟ್ಟರ್ ಪೇಜ್ ನಲ್ಲಿ ಅಪ್ಲೋಡ್ ಆಗಿತ್ತು. ಈ ಟ್ವೀಟ್ ಅನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹ ಕೇಳಿ ಬಂದಿತ್ತು.