18 ಅಪ್ರಾಪ್ತ ವಿದ್ಯಾರ್ಥಿನಿಯರ ಲೈಂಗಿಕ ದೌರ್ಜನ್ಯ: ಶಾಲೆಯ ಟಾಯ್ಲೆಟ್ ನಲ್ಲಿ ಬಳಸಿದ ಕಾಂಡೊಮ್ ಪತ್ತೆ
Wednesday, May 17, 2023
ಶಹಜಹಾನ್‌ಪುರ(ಉತ್ತರ ಪ್ರದೇಶ): ಉತ್ತರ ಪ್ರದೇಶ ರಾಜ್ಯದ ಷಹಜಹಾನ್‌ಪುರ ಜಿಲ್ಲೆಯ ಸರ್ಕಾರಿ ಶಾಲೆಯ ಕಂಪ್ಯೂಟರ್ ಶಿಕ್ಷಕನೊಬ್ಬ ಕನಿಷ್ಠ 18 ಬಾಲಕಿಯರಿಗೆ ಕಿರುಕುಳ ನೀಡಿರುವ ಆರೋಪದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಆರೋಪಿ ಕೃತ್ಯವನ್ನು ಬೆಂಬಲಿಸಿದ್ದಕ್ಕಾಗಿ ಶಾಲೆಯ ಪ್ರಾಂಶುಪಾಲ ಮತ್ತು ಸಹಾಯಕ ಶಿಕ್ಷಕಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲೈಂಗಿಕ ಕಿರುಕುಳ ಕೊಡುತ್ತಿದ್ದ ಕಾಮುಕ ಕಂಪ್ಯೂಟರ್ ಶಿಕ್ಷಕ ಮೊಹಮ್ಮದ್ ಅಲಿ, ಸಹಾಯಕ ಶಿಕ್ಷಕಿ ಸಾಜಿಯಾ ಮತ್ತು ಶಾಲೆಯ ಪ್ರಾಂಶುಪಾಲ ಅನಿಲ್ ಪಾಠಕ್ ಬಂಧಿತ ಆರೋಪಿಗಳು.
ಕಂಪ್ಯೂಟರ್ ಶಿಕ್ಷಕರು ತನ್ನನ್ನು ಹಾಗೂ ಇತರ ವಿದ್ಯಾರ್ಥಿನಿಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದಾನೆ ಎಂದು ಬಾಲಕಿಯೊಬ್ಬಳು ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದಾಳೆ. ಆದ್ದರಿಂದ ಆಕೆಯ ಪೋಷಕರು ಶಾಲೆಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಶಾಲೆಯ ಶೌಚಾಲಯದಿಂದ ಬಳಸಿದ ಕಾಂಡೋಮ್‌ಗಳು ದೊರಕಿದೆ. ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದ್ದರಿಂದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಹಾಯಕ ಶಿಕ್ಷಕಿ ಸಹಿತ ಪ್ರಾಂಶುಪಾಲರನ್ನು ಅಮಾನತುಗೊಳಿಸಿದ್ದಾರೆ.
ಪ್ರಕರಣದಲ್ಲಿ ಸುಮಾರು 18ರಷ್ಟು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಕಾಮುಕ ಕಂಪ್ಯೂಟರ್ ಬೋಧಕ ಮೊಹಮ್ಮದ್ ಅಲಿ, ಶಾಲೆಯಲ್ಲಿ ಕಲಿಯುತ್ತಿರುವ ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡುತ್ತಿದ್ದ. ಆತನಿಗೆ ಪ್ರಾಂಶುಪಾಲ ಅನಿಲ್ ಪಾಠಕ್ ಮತ್ತು ಮತ್ತೋರ್ವ ಶಿಕ್ಷಕಿ ಸಾಜಿಯಾ ಬೆಂಬಲ ನೀಡಿದ್ದಾರೆ ಎಂದು ತಿಲ್ದಾರ್ ಸರ್ಕಲ್ ಅಧಿಕಾರಿ ಪ್ರಿಯಾಂಕ್ ಹೇಳಿದ್ದಾರೆ. ಗ್ರಾಮದ ಮುಖ್ಯಸ್ಥ ಪ್ರಧಾನ್ ಲಲತಾ ಪ್ರಸಾದ್ ಎಲ್ಲಾ ಆರೋಪಿಗಳ ವಿರುದ್ಧ ತಿಲ್ದಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, ಐಪಿಸಿ ಮತ್ತು ಪೋಕ್ಸೊ(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.