ಬೈಬಲ್ ಹೊಂದಿದ್ದಕ್ಕೆ 2ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಉತ್ತರ ಕೊರಿಯಾ
Saturday, May 27, 2023
ಉತ್ತರ ಕೊರಿಯಾ: ಕಳೆದ ಕೆಲವು ಸಮಯಗಳಿಂದ ಉತ್ತರ ಕೊರಿಯಾದಲ್ಲಿ ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿಕೊಂಡು ಕಠಿಣ ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ವರದಿಯಲ್ಲಿ ಬಯಲಾಗಿದೆ. 2022ರಲ್ಲಿ ಉತ್ತರ ಕೊರಿಯಾದಲ್ಲಿ ಸುಮಾರು 70,000 ಸಾವಿರಕ್ಕಿಂತ ಅಧಿಕ ಕ್ರಿಶ್ಚಿಯನ್ ಸಮುದಾಯದವರನ್ನು ಬಂಧಿಸಲಾಗಿತ್ತು. ಬಂಧಿತರ ಪೈಕಿ ಎರಡು ವರ್ಷದ ಮಗು ಕೂಡ ಇದೆ ಎಂದು ತಿಳಿದು ಬಂದಿದೆ.
ಕ್ರಿಶ್ಚಿಯನ್ ಸಮುದಾಯದವು ಬೈಬಲ್ ಹೊಂದಿರುವ ಕಾರಣಕ್ಕೆ ಮತ್ತು ಧಾರ್ಮಿಕ ಆಚರಣೆಯ ಸಂಬಂಧ ಅವರನ್ನು ಬಂಧಿಸಲಾಗುತ್ತಿದೆ. ಶಾಮನಿಕ್ ಅನುಯಾಯಿಗಳು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಪ್ರತಿನಿತ್ಯ ಹಲ್ಲೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಪ್ರಕರಣದಲ್ಲಿ 2ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆಯನ್ನು ಉತ್ತರ ಕೊರಿಯಾ ಸರ್ಕಾರ ವಿಧಿಸಿದೆ. ಬಾಲಕನ ಪೋಷಕರು ಮನೆಯಲ್ಲಿ ಬೈಬಲ್ ಹೊಂದಿದ್ದರು ಎಂಬ ಕಾರಣಕ್ಕೆ ಅವರನ್ನು ಗಲ್ಲಿಗೇರಿಸಲಾಗಿತ್ತು. ಆದರೆ ಬಾಲಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಸರ್ಕಾರವು ಧಾರ್ಮಿಕ ಆಚರಣೆಯಲ್ಲಿ ತೊಡಗಿರುವ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರಿಗೆ ಕಿರುಕುಳವನ್ನು ನೀಡಲಾಗುತ್ತದೆ. ಕಿರುಕುಳಕ್ಕೊಳಗಾದ ವ್ಯಕ್ತಿಗಳನ್ನು ಬಂಧಿಸಿ ಕೆಲಸ ಮಾಡಲು ಹೇಳಬಹುದು, ಚಿತ್ರಹಿಂಸೆ ನೀಡಬಹುದು ಅಥವಾ ಲೈಂಗಿಕ ದೌರ್ಜನ್ಯ ಎಸಗಬಹುದು ಎಂದು ಅಲ್ಲಿನ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.