ಕೇರಳ ದೋಣಿ ದುರಂತದಲ್ಲಿ 21 ಮಂದಿ ಸಾವು: ಇನ್ನಷ್ಟು ಮಂದಿ ಕೆಸರಿನಲ್ಲಿ ಹೂತುಹೋಗಿರುವ ಶಂಕೆ
Monday, May 8, 2023
ಮಲಪ್ಪುರಂ: ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ ತನೂರಿನಲ್ಲಿರುವ ತೂವಲ್‌ರಂ ಪ್ರವಾಸಿ ತಾಣದ ಪುರಪುಳ ನದಿಯಲ್ಲಿ ರವಿವಾರ ಸಂಭವಿಸಿರುವ ಪ್ರವಾಸಿ ದೋಣಿ ದುರಂತದಲ್ಲಿ 21 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆಂದು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು ಪ್ರಕಟಿಸಿದ್ದಾರೆ.
ಪ್ರಾದೇಶಿಕ ಅಗ್ನಿಶಾಮಕ ದಳ ಅಧಿಕಾರಿ ಶಿಜು ಕೆ.ಕೆ. ಪ್ರಕಾರ, ''ಈ ದೋಣಿ ದುರಂತದಲ್ಲಿ ಸಾವಿಗೀಡಾಗಿರುವ 21 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬುದು ನಿಖರವಾಗಿ ತಿಳಿದಿಲ್ಲ. ಇನ್ನಷ್ಟು ಮಂದಿ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆಯೇ ಎಂದು ತಿಳಿಯಲು ಶೋಧ ಕಾರ್ಯಾಚರಣೆ ಮುಂದುವರಿಸಿಸಲಾಗಿದೆ".
ಈತನ್ಮಧ್ಯೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯ ಆರೋಗ್ಯ ಇಲಾಖೆಯ ತುರ್ತುಸಭೆಯನ್ನು ಮಧ್ಯರಾತ್ರಿ ನಡೆಸಿ, ಘಟನೆಯಲ್ಲಿ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಜೊತೆಗೆ ಮೃತರ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯನ್ನು ಶೀಘ್ರ ಮುಗಿಸುವಂತೆ ಆದೇಶಿಸಿದ್ದಾರೆ.
ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಸಿಎಂ ಪಿಣರಾಯಿ ವಿಜಯನ್, ಪರಿಹಾರ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಸಮನ್ವಯಗೊಳಿಸುವಂತೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.