ಮಂಗಳೂರು: ಅಕ್ರಮ ಸಾಗಾಟದ 22ಕೆಜಿ ಗಾಂಜಾ ಸಾಗಾಟ - ಓರ್ವ ಆರೋಪಿ ವಶಕ್ಕೆ
Monday, May 29, 2023
ಮಂಗಳೂರು: ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣದಿಂದ ಮಂಗಳೂರು ಮತ್ತು ಕೇರಳದಲ್ಲಿ ಮಾರಾಟ ಮಾಡಲೆಂದು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಬೃಹತ್ ಪ್ರಮಾಣದ ಗಾಂಜಾವನ್ನು ಪತ್ತೆಹಚ್ಚಿರುವ ಮಂಗಳೂರು ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸಿ 23.250 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಬನೂರು, ಬಂದ್ಯೋಡ್ ನ ಮೊಯಿದ್ದೀನ್ ಶಬೀರ್ (35) ಬಂಧಿತ ಆರೋಪಿ.
ಆರೋಪಿ ಮೊಯ್ದೀನ್ ಶಬೀರ್ ಮಹೇಂದ್ರ ಕೆಯುವಿ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸಾಗಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮಂಗಳೂರು ಸಿಸಿಬಿ ಪೊಲೀಸರಿಗೆ ಲಭ್ಯವಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರು ಮುಡಿಪು ಕಾಯರಗೋಳಿ ಕ್ರಾಸ್ ನಲ್ಲಿ ಕಾರನ್ನು ಪತ್ತೆ ಹಚ್ಚಿದ್ದಾರೆ. ಈ ವೇಳೆ ಕಾರನ್ನು ಸ್ವಾಧೀನಪಡಿಸಿಕೊಂಡ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಈ ವೇಳೆ ಕಾರಿನಲ್ಲಿದ್ದ 23.250 ಕೆಜಿ ಗಾಂಜಾ, 2 ಮೊಬೈಲ್ ಫೋನ್ ಗಳು ನಗದು ರೂ. 220 ರೂ. ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 12,96,470 ರೂ. ಆಗಿದೆ. ಆರೋಪಿ ವಿಶಾಖಪಟ್ಟಣದಿಂದ ಬೆಂಗಳೂರು ಮೂಲಕ ಗಾಂಜಾವನ್ನು ಕಾರಿನಲ್ಲಿರಿಸಿ ಸಾಗಾಟ ಮಾಡುತ್ತಿದ್ದನು. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿ ಮೊಯಿದ್ದೀನ್ ಶಬೀರ್ ವಿರುದ್ಧ ಈಗಾಗಲೇ ಕೇರಳದ ಕಾಸರಗೋಡು, ಮಂಜೇಶ್ವರ, ಕುಂಬ್ಳೆ, ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಹಲ್ಲೆ, ಕೊಲೆ ಸೇರಿದಂತೆ ಒಟ್ಟು 12 ಪ್ರಕರಣಗಳು ದಾಖಲಾಗಿರುತ್ತದೆ. ಅಲ್ಲದೆ ಆಂಧ್ರಪ್ರದೇಶದಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.