-->
ಯೂಟ್ಯೂಬ್ ವೀಡಿಯೋಗೆಂದು ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ರೈಡಿಂಗ್ - ಯೂಟ್ಯೂಬರ್ ದಾರುಣ ಸಾವು

ಯೂಟ್ಯೂಬ್ ವೀಡಿಯೋಗೆಂದು ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ರೈಡಿಂಗ್ - ಯೂಟ್ಯೂಬರ್ ದಾರುಣ ಸಾವು



ನವದೆಹಲಿ: ಯೂಟ್ಯೂಬರ್ ಒಬ್ಬರು ಯೂಟ್ಯೂಬ್ ವೀಡಿಯೋಗಾಗಿ ಗಂಟೆಗೆ 300 ಕಿ.ಮೀ. ವೇಗದಲ್ಲಿ ಬೈಕ್ ಓಡಿಸುತ್ತಿರುವಾಗ ನಿಯಂತ್ರಣ ತಪ್ಪಿದ  ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿ ದಾರುಣವಾಗಿ ಮೃತಪಟ್ಟ ಘಟನೆ ಮೇ 4ರಂದು ಬೆಳಗ್ಗೆ 10 ಗಂಟೆಗೆ ಯುಮುನಾ ಎಕ್ಸ್‌ ಪ್ರೆಸ್ ವೇನಲ್ಲಿ ನಡೆದಿದೆ.

ಮೃತ ಯೂಟ್ಯೂಬರ್‌ನನ್ನು ವೃತ್ತಿಪರ ಬೈಕರ್ ಅಗಸ್ತ್ಯ ಚೌಹಾಣ್ (22) ಎಂದು ಗುರುತಿಸಲಾಗಿದೆ. ಅಗಸ್ತ್ಯ ಚೌಹಾಣ್ ಉತ್ತರಾಖಂಡದ ಡೆಹ್ರಾಡೂನ್‌ನ ಕನ್ನಾಟ್ ಪ್ಲೇಸ್ ನಿವಾಸಿ. ಇವರು ವೃತ್ತಿಪರ ಬೈಕ್ ರೈಡರ್ ಹಾಗೂ ಯೂಟ್ಯೂಬರ್ ಆಗಿದ್ದರು‌. ದುರಾದೃಷ್ಟವಶಾತ್ ಬೈಕ್ ಅಪಘಾತದಿಂದಲೇ ಅವರು ಮರಣಿಸಿದ್ದಾರೆ.


ಅಗಸ್ತ್ಯ ಚೌಹಾಣ್ ದೆಹಲಿಯಲ್ಲಿ ನಡೆಯುತ್ತಿರುವ ಮೋಟಾರ್ ಬೈಕ್ ರೇಸಿಂಗ್ ಸ್ಪರ್ಧೆಗಾಗಿ ಆಗ್ರಾದಿಂದ ಬೈಕ್‌ನಲ್ಲಿ ತೆರಳಿದ್ದರು. ಈ ವೇಳೆ ZX 10R ನಿಂಜಾ ಸೂಪರ್‌ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಅವರು ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಓಡಿಸಲು ಪ್ರಯತ್ನಿಸಿದ್ದರು. ಆದರೆ, ನಿಯಂತ್ರಣ ಕಳೆದುಕೊಂಡ ಬೈಕ್ ಉತ್ತರ ಪ್ರದೇಶದ ಯಮುನಾ ಎಕ್ಸ್ ಪ್ರೆಸ್‌ವೇನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಅಗಸ್ತ್ಯ ಧರಿಸಿದ್ದ ಹೆಲ್ಮಟ್ ಕೂಡ ಛಿದ್ರವಾಗಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡು ತಲೆಗೆ ತೀವ್ರವಾದ ಪೆಟ್ಟು ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ಜಾಗದಲ್ಲಿ ಅಗಸ್ತ್ಯ ಮೃತದೇಹದ ಸುತ್ತ ರಕ್ತ ಮಡುಗಟ್ಟಿತ್ತು.

ಅಗಸ್ಯ ಅವರು 'ಪ್ರೊ ರೈಡರ್ 1000' ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದರು. ಅವರು ಈ ಚಾನೆಲ್ ನಲ್ಲಿ 1.2 ಮಿಲಿಯನ್ ಚಂದಾದಾರರನ್ನು ಸಹ ಹೊಂದಿದ್ದರು‌. ಅಪಘಾತ ಸಂಭವಿಸುವ 16 ಗಂಟೆಗಳ ಮೊದಲು ಅವರು ಯೂಟ್ಯೂಬ್‌ನಲ್ಲಿ ವಿಡಿಯೋ ಒಂದನ್ನು ಅಪ್‌ಲೋಡ್ ಮಾಡಿದ್ದರು. ಅದರಲ್ಲಿ ತನ್ನ ಸ್ನೇಹಿತರನ್ನು ದೆಹಲಿಗೆ ಬರುವಂತೆ ಹೇಳಿದ್ದಾನೆ. ಅವರು ತಮ್ಮ ಚಾನೆಲ್‌ನಲ್ಲಿ ಪ್ರತಿ ಬಾರಿ ವಿಡಿಯೋವನ್ನು ಅಪ್‌ಲೋಡ್ ಮಾಡಿದಗಲೂ ವೇಗವಾಗಿ ಬೈಕ್ ಚಲಾಯಿಸಬೇಡಿ ಎಂದು ಎಚ್ಚರಿಕೆ ಸಂದೇಶ ಹಾಕುತ್ತಿದ್ದರು. ಆದರೆ, ಇಂದು ಅವರೇ ವೇಗದ ಚಾಲನೆಯಿಂದ ದುರ್ಮರಣಕ್ಕೀಡಾಗಿದ್ದಾರೆ.

ಉತ್ತರಾಖಂಡ ಪೊಲೀಸರನ್ನು ಸಂಪರ್ಕಿಸಿ ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತ ನಡೆದ ವೇಳೆ ಸ್ನೇಹಿತರು ಕೂಡ ಅವರೊಂದಿಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article