ಚಿಕಿತ್ಸೆ ನೀಡುತ್ತಿದ್ದಾಗಲೇ ವೈದ್ಯೆಯ ಹತ್ಯೆ ಪ್ರಕರಣ: ಆರೋಪಿ ಮಾನಸಿಕ ಅಸ್ವಸ್ಥನಲ್ಲ ವೈದ್ಯರ ಸ್ಪಷ್ಟನೆ
Monday, May 15, 2023
ತಿರುವನಂತಪುರಂ: ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಕೇರಳದ ಮಹಿಳಾ ವೈದ್ಯೆ ಡಾ.ವಂದನಾ ದಾಸ್ ರನ್ನು ಇರಿದು ಹತ್ಯೆ ಮಾಡಿರುವ ಆರೋಪಿಗೆ ಯಾವುದೇ ಮಾನಸಿಕ ಸಮಸ್ಯೆಯಿಲ್ಲ ಎಂದು ತಿರುವನಂತಪುರಂನಲ್ಲಿರುವ ಸರ್ಕಾರಿ ವೈದ್ಯಕೀಯ ಆರೋಗ್ಯ ಕೇಂದ್ರದ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕೊಲೆ ಆರೋಪಿ ಸಂದೀಪ್‌ಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ವೈದ್ಯರು ದೃಢಪಡಿಸಿದ್ದಲ್ಲಿ ಆತನನ್ನು ಮಾನಸಿಕ ಆರೋಗ್ಯ ಚಿಕಿತ್ಸೆಗೆ ಒಳಪಡಿಸಲು ಉದ್ದೇಶಿಸಲಾಗಿತ್ತು. ಆದ್ದರಿಂದ ಪೊಲೀಸರು ತಪಾಸಣೆಗೆ ಕರೆತಂದಿದ್ದರು. ಆದರೆ ಆರೋಪಿ ಸಂದೀಪ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಪೊಲೀಸರ ಉಪಸ್ಥಿತಿಯಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಚಿಕಿತ್ಸೆಯ ವೇಳೆ ವೈದ್ಯರು ಹಾಗೂ ಪೊಲೀಸರು ತೊಂದರೆ ಕೊಡಬಹುದು ಎಂಬ ಭಯದಿಂದ ಆರೋಪಿ ಆಕ್ರೋಶಗೊಂಡಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿರುವುದು ವರದಿಯಾಗಿದೆ. ಸದ್ಯ ಆರೋಪಿಯನ್ನು ತಿರುವನಂತಪುರಂನ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಏನಿದು ಘಟನೆ?
ಆರೋಪಿ ಸಂದೀಪ್ ನೆರೆಹೊರೆಯವರೊಂದಿಗೆ ಜಗಳವಾಡಿ ತೀವ್ರವಾಗಿ ಗಾಯಗೊಂಡು ಪೊಲೀಸ್ ಸುಪರ್ದಿಯಲ್ಲಿದ್ದ. ಗಾಯಗೊಂಡಿದ್ದ ಆತನನ್ನು ಹೆಚ್ಚಿನ ಚಿಕಿತ್ಸೆಗೆಂದು ಪೊಲೀಸರು ಕೊಟ್ಟಾರಕಂನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆರೋಪಿ ಕಾಲಿಗೆ ತೀವ್ರವಾಗಿ ಗಾಯವಾಗಿದ್ದ ಹಿನ್ನೆಲೆಯಲ್ಲಿ ಮೇ 10 ರಂದು ವೈದ್ಯೆ ಡಾ.ವಂದಿತಾ ದಾಸ್ ಚಿಕಿತ್ಸೆ ನೀಡಿ ಡ್ರೆಸ್ಸಿಂಗ್ ಮಾಡುತ್ತಿದ್ದರು. ಈ ವೇಳೆ ಆರೋಪಿ ಪಕ್ಕದ ಟೇಬಲ್‌ನಲ್ಲಿಟ್ಟಿದ್ದ ಸಲಕರಣೆಗಳನ್ನು ತೆಗೆದುಕೊಂಡು ಪೊಲೀಸರಿಗೆ ಬೆದರಿಸಿ ಡಾ.ವಂದನಾಗೆ ಹಲವಾರು ಬಾರಿ ಇರಿದು ಕೊಂದಿದ್ದಾನೆ.
ಈ ವೇಳೆ ಆರೋಪಿಯನ್ನು ಹಿಡಿಯಲು ಮುಂದಾದ ಪೊಲೀಸ್ ಹಾಗೂ ವೈದ್ಯರ ಮೇಲೆಯೂ ಆರೋಪಿ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಪೊಲೀಸರು ಹಾಗೂ ಆಸ್ಪತ್ರೆಯಲ್ಲಿದ್ದ ಇತರರ ಸಹಾಯದೊಂದಿಗೆ ಆರೋಪಿಯನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.