ಕಂಪೆನಿ ಮಾಲಕನ ಬ್ಯಾಂಕ್ ಖಾತೆಯಿಂದಲೇ ಬಾಯ್ ಫ್ರೆಂಡ್ ಖಾತೆಗೆ ಹಣ ವರ್ಗಾವಣೆ: ಮೂವರು ಯುವತಿಯರು ಸೇರಿ ನಾಲ್ವರು ಅರೆಸ್ಟ್
Thursday, May 18, 2023
ಬೆಂಗಳೂರು: ತಾನು ಕೆಲಸ ಮಾಡುತ್ತಿರುವ ಕಂಪೆನಿ ಮಾಲಕನ ಬ್ಯಾಂಕ್ ಖಾತೆಯಿಂದ ತನ್ನ ಬಾಯ್ ಫ್ರೆಂಡ್ ಹಾಗೂ ಸಹೋದರಿಯರ ಬಾಯ್ ಫ್ರೆಂಡ್ ಗಳ ಖಾತೆಗೆ ಚಾಲಾಕಿ ಯುವತಿಯೋರ್ವಳು ಹಣ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಠಾಣಾ ಪೊಲೀಸರು ಇಬ್ಬರು ಯುವತಿಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ನಕ್ಷು ಕುಶಾಲಪ್ಪ, ಗಯನಾ ಅಲಿಯಾಸ್ ರಿಯಾ, ಜಾನು ಅಲಿಯಾಸ್ ರೀತ್ ಮತ್ತು ಜಾಹ್ನವಿ ಅಲಿಯಾಸ್ ರೀತು ಬಂಧಿತ ಆರೋಪಿಗಳು. ವೆಂಕಟೇಶ್ ರೆಡ್ಡಿ ಎಂಬವರ ಕಂಪೆನಿಯಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಜಾಹ್ನವಿ ಅಲಿಯಾಸ್ ರೀತುಗೆ ಕಂಪೆನಿಯ ಕೆಲವು ವ್ಯವಹಾರ ಹಾಗೂ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಕೆಲಸಗಳನ್ನೂ ನೀಡಿದ್ದರು.
ಕಚೇರಿ ವ್ಯವಹಾರದ ಹಣ ವರ್ಗಾವಣೆ ಸಮಯದಲ್ಲಿ ತನ್ನ ಬಾಯ್ ಫ್ರೆಂಡ್ ಹಾಗೂ ಸಹೋದರಿಯರ ಬಾಯ್‌ಫ್ರೆಂಡ್‌ಗಳ ಬ್ಯಾಂಕ್ ಖಾತೆಗೂ ಹಣ ವರ್ಗಾವಣೆ ಮಾಡುತ್ತಿದ್ದಳು. ಈ ಮೂಲಕ ಅವಳು ಈವರೆಗೆ 2.10 ಲಕ್ಷ ರೂ. ಹಣ ವರ್ಗಾವಣೆ ಮಾಡಿ, ವಂಚನೆ ಎಸಗಿದ್ದಳು. ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರಣ್ಯಪುರ ಠಾಣೆಗೆ ವೆಂಕಟೇಶ್ ರೆಡ್ಡಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ವಿದ್ಯಾರಣ್ಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.