ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮಾಂಸವನ್ನೇ ತಿಂದ ಯುವಕ ಅರೆಸ್ಟ್
Monday, May 29, 2023
ಜೈಪುರ : ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆಗೈದು ಆಕೆಯ ಮಾಂಸವನ್ನು ತಿಂದಿರುವ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವಕನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.
ಈ ಹೇಯ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಕೃತ್ಯ ಎಸಗಿದಾತನನ್ನು ಸುರೇಂದ್ರ ಠಾಕೂರ್ ಎಂದು ಗುರುತಿಸಲಾಗಿದೆ. ಈತ ಹೈಡೋಫೋಬಿಯಾದಿಂದ ಬಳಲುತ್ತಿರುವುದಾಗಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಆದ್ದರಿಂದ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುರೇಂದ್ರ ವಿರುದ್ಧ ಐಪಿಸಿ ಸೆಕ್ಷನ್ 302 ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸುರೇಂದ್ರ ಆರೋಗ್ಯದ ಬಗ್ಗೆ ಬಂಗಾರ್ ಆಸ್ಪತ್ರೆಯ ವೈದ್ಯರು ಪ್ರತಿಕ್ರಿಯಿಸಿ, ಸುರೇಂದ್ರ ಹೈಡೋಫೋಬಿಯಾದಿಂದ ಬಳಲುತ್ತಿದ್ದಾನೆ. ಆತನಿಗೆ ಈ ಹಿಂದೆ ನಾಯಿ ಕಚ್ಚಿರಬಹುದು. ಅದಕ್ಕೆ ಸರಿಯಾದ ಚಿಕಿತ್ಸೆ ಪಡೆದಿಲ್ಲ ಅನಿಸುತ್ತದೆ. ಆದ್ದರಿಂದ ಆತ ಕೊನೆಯ ಹಂತದ ರೇಬಿಸ್ ರೋಗದಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಮಹಿಳೆಯನ್ನು ಆತ ಕೊಲೆಗೈಯುವ ದೃಶ್ಯವನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಮಾತನಾಡಿ, 65 ವರ್ಷದ ಶಾಂತಿ ದೇವಿಯವರು ದನ ಮೇಯಿಸಲು ತೆರಳಿದ್ದರು. ಈ ಸಂದರ್ಭ ಸುರೇಂದ್ರ ಏಕಾಏಕಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಬಳಿಕ ಕಲ್ಲಿನಿಂದ ಜಜ್ಜಿ ಶಾಂತಿದೇವಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಆರೋಪಿ ಮಾನಸಿಕ ರೋಗಿ ಆಗಿರುವುದು ಆತನ ವರ್ತನೆಯಿಂದ ಗೊತ್ತಾಯಿತು. ಆಸ್ಪತ್ರೆಯಲ್ಲಿಯೂ ಆತ ತನ್ನ ವರ್ತನೆ ಮುಂದುವರಿಸಿದ್ದಾನೆ. ಹೀಗಾಗಿ ಆಸ್ಪತ್ರೆ ನಸ್‌ರ್ಗಳು ಆತನ ಕೈ-ಕಾಲುಗಳನ್ನು ಬೆಡ್‌ಗೆ ಕಟ್ಟಿಹಾಕಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಸುಬ್ರಾಂ ಬಿಸ್ಟೋಯಿ ತಿಳಿಸಿದ್ದಾರೆ.