ದುಪ್ಪಟ್ಟ ಹಾಕದ ಯುವತಿಯರೇ ಈತನ ಟಾರ್ಗೆಟ್: ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಸೈಕೋ ಶರವಣ್ ಈಗ ಪೊಲೀಸ್ ಅತಿಥಿ
Tuesday, May 30, 2023
ಚೆನ್ನೈ: ಕೇವಲ ಚೂಡಿದಾರ್ ಧರಿಸಿ ದುಪ್ಪಟ್ಟ ಹಾಕದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಸೈಕೋವನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತನಿಖೆ ನಡೆಸಿರುವ ಪೊಲೀಸರು ಆತನ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.
ಸೈಕೋ ಶರವಣನ್ ಬಂಧಿತ ಆರೋಪಿ. ಈತ ಚೆನ್ನೈನ ಕುಕಪ್ಪೇರ್ ಪ್ರದೇಶದ 22 ವರ್ಷದ ಸಂತ್ರಸ್ತ ಯುವತಿ ತಿರುಮಂಗಲಂ ಮಹಿಳಾ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಸೈಕೋ ಶರವಣನ್ ಬಂಧನವಾಗಿದೆ.
2021ರಲ್ಲಿ ತಿರುಮಂಗಲಂ ಪ್ರದೇಶದಲ್ಲಿ ನಡೆದುಕೊಂಡು ಬರುತ್ತಿದ್ದ ಸಂತ್ರಸ್ತೆಗೆ ಬೈಕ್ ನಲ್ಲಿ ಬಂದ ಶರವಣನ್ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ. ಬಳಿಕ ಆತನ ಬಂಧನವಾಗಿತ್ತು. ಆ ಬಳಿಕ ಆತ ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ. ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಗೊಂಡರೂ ಸುಮ್ಮನಾಗದೇ ತನ್ನ ಕೃತ್ಯವನ್ನು ಆತ ಮುಂದುವರಿಸಿದ್ದ.
ಶರವಣನ್ ವಿರುದ್ಧ ಅಣ್ಣಾ ನಗರ, ಜೆಜೆ ನಗರ, ತಿರುಮಂಗಲಂ, ಪೆರವಳ್ಳೂರು ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಸ್ತೆಯಲ್ಲಿ ಯಾವುದೇ ಯುವತಿ ಒಂಟಿಯಾಗಿ ನಡೆದುಕೊಂಡು ಬರುತ್ತಿದ್ದರೆ ಆತ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಅದರಲ್ಲೂ ಸುಂದರ ಹೆಂಗಸರು ಹಾಗೂ ಮಾಡ್ರನ್ ಡ್ರೆಸ್ ತೊಟ್ಟ ಹೆಂಗಸರನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಚೂಡಿದಾರ್ ಧರಿಸಿ, ದುಪ್ಪಟ್ಟ ಹಾಕದೆ ರಸ್ತೆಗೆ ಇಳಿದರೆ ಅಂಥವರೇ ಈತನ ಟಾರ್ಗೆಟ್ ಆಗಿತ್ತು. ಪ್ರತಿದಿನ ಕನಿಷ್ಠ 5 ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಇಲ್ಲಿಯವರೆಗೆ 100ಕ್ಕೂ ಅಧಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನಗನಲಾಗಿದೆ.
ಆರೋಪಿ ಶರವಣನ್ ಮುಕ್ಕಪೇರು ಪ್ರದೇಶದಲ್ಲಿ ವಾಸವಾಗಿದ್ದಾನೆ. ಆತನಿಗೆ ಖಾಯಂ ಕೆಲಸ ಇರಲಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಹಣ ಸಂಪಾದಿಸುತ್ತಿದ್ದ. ಬಂದ ಹಣದಲ್ಲಿ ಬೈಕ್ ಬಾಡಿಗೆ ಪಡೆಯುತ್ತಿದ್ದ. ತಿರುಮಂಗಲಂ, ಮುಕಪೇರು, ಜೆಜೆ ನಗರ ಮತ್ತು ನೊಲಂಪುರ್ ಏರಿಯಾಗಳಲ್ಲಿ ಸುತ್ತಾಡುತ್ತಾ ರಸ್ತೆಗಳಲ್ಲಿ ಸಿಕ್ಕ ಯುವತಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಅಥವಾ ಯುವತಿಯರ ಬಳಿ ಹೋಗುತ್ತಿದ್ದ ಆತ ದಿಢೀರನೇ ಅವರನ್ನು ತಬ್ಬಿಕೊಂಡು ಚುಂಬಿಸುತ್ತಿದ್ದ. ಬಳಿಕ ಅವರ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಅಲ್ಲಿಂದ ಪರಾರಿಯಾಗುತ್ತಿದ್ದ.
ಘಟನೆಯ ಸಂಬಂಧ ಆಯಾ ಪ್ರದೇಶಗಳ ಪೊಲೀಸರಿಗೆ ದೂರುಗಳು ಬಂದಿವೆ. ಇದೀಗ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶರವಣನ್ ಎಂಬಾತನೇ ಲೈಂಗಿಕ ಕಿರುಕುಳ ಎಸಗಿರುವುದು ದೃಢಪಟ್ಟ ಬಳಿಕ ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಶರವಣನನ್ನು ಗುರುತಿಸಿದ್ದ ಪೊಲೀಸರಿಗೆ ಆತ ಎಲ್ಲಿದ್ದಾನೆಂದು ಪತ್ತೆಯಾಗಿರಲಿಲ್ಲ. ಹೀಗಾಗಿ ಜೆಜೆ ನಗರ ಪೊಲೀಸರು ವಿಶೇಷ ಪಡೆ ರಚಿಸಿ ಶರವಣನಿಗಾಗಿ ಶೋಧ ನಡೆಸಿದರು.
ಅಷ್ಟರಲ್ಲಾಗಲೇ ಆತ ಮುಕಾಬರ್‌ನಲ್ಲಿ ಅವಿತಿದ್ದ ಎಂಬ ಮಾಹಿತಿ ದೊರಕಿತ್ತು. ಅಲ್ಲಿಗೆ ತೆರಳಿ ಸೈಕೋ ಶರವಣನನ್ನು ಸುತ್ತುವರಿದು ಬಂಧಿಸಿದ್ದಾರೆ. ನಂತರವೂ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನನ್ನು ಪೊಲೀಸರು ಬೆನ್ನಟ್ಟಿ ಹೋದಾಗ ರಸ್ತೆಬದಿಯಲ್ಲಿದ್ದ ಮಳೆ ನೀರು ಚರಂಡಿಯ ತೋಡಿಗೆ ಬಿದ್ದು ಕೈ ಮುರಿದುಕೊಂಡಿದ್ದ. ಹೀಗಾಗಿ ಶರವಣನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಸೈಕೋ ಶರವಣನ ಬಂಧನದಿಂದ ಮಹಿಳೆಯರು ನಿಟ್ಟುಸಿರು ಬಿಡುವಂತಾಗಿದೆ.