ಫ್ಯಾಷನ್ ಉದ್ಯಮಿ ರೂಪಾಲಿಯೊಂದಿಗೆ ಎರಡನೇ ವಿವಾಹವಾದ ನಟ ಆಶಿಶ್ ವಿದ್ಯಾರ್ಥಿ
Thursday, May 25, 2023
ನವದೆಹಲಿ: ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ನಟಿಸಿರುವ ನಟ ಆಶಿಶ್ ವಿದ್ಯಾರ್ಥಿಯವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಇದೀಗ ಅವರು ತಮ್ಮ ಎರಡನೇ ವಿವಾಹದಿಂದ ಸುದ್ದಿಯಲ್ಲಿದ್ದಾರೆ. ಅವರು ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರೊಂದಿಗೆ ಕೊಲ್ಕತಾ ಕ್ಲಬ್‌ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಆಶಿಶ್ ವಿದ್ಯಾರ್ಥಿ ಹಾಗೂ ರೂಪಾಲಿ ಬರುವಾ ಅವರು ತಮ್ಮ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ರಿಜಿಸ್ಟರ್ ವಿವಾಹವಾಗಿದ್ದಾರೆ. ಆಶಿಶ್ ವಿದ್ಯಾರ್ಥಿ ಈ ಹಿಂದೆ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು.
ಇಬ್ಬರಿಗೂ ಸರಳವಾಗಿ ದಾಂಪತ್ಯ ಜೀವನವನ್ನು ಸ್ವೀಕರಿಸಬೇಕೆಂಬ ಬಯಕೆಯಿತ್ತಂತೆ. ಅದರಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದೇವೆ. ಗುರುವಾರ ಅವರು ರಿಜಿಸ್ಟರ್ ಮದುವೆಯಾಗಿದ್ದು, ಸಂಜೆ ಸಣ್ಣ ಗೆಟ್ ಟು ಗೆದರ್ ನಡೆಯಲಿದೆ ಎಂದು ಆಶಿಶ್ ವಿದ್ಯಾರ್ಥಿ ಸ್ಪಷ್ಟನೆ ಕೊಟ್ಟಿದ್ದಾರೆ. ನೀವಿಬ್ಬರು ಎಲ್ಲಿ ಮೊದಲು ಭೇಟಿಯಾಗಿರುವುದು ಎಂದು ಕೇಳಿದಾಗ, ಓಹ್… ಅದೊಂದು ದೊಡ್ಡ ಕಥೆ ಎಂದು ಹೇಳಿಕೊಂಡಿದ್ದಾರೆ.
11 ಭಾಷೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಆಶಿಶ್ ವಿದ್ಯಾರ್ಥಿ ನಟಿಸಿದ್ದಾರೆ. ಗುವಾಹಟಿ ಮೂಲದ ರೂಪಾಲಿ, ಕೊಲ್ಕತಾದಲ್ಲಿ ದೊಡ್ಡಮಟ್ಟದಲ್ಲಿ ಫ್ಯಾಷನ್ ಅಂಗಡಿ ಹೊಂದಿದ್ದಾರೆ.