ಪುತ್ತೂರು: ಹಿಂದೂ ಯುವತಿಯೊಂದಿಗೆ ಕಾಣಿಸಿಕೊಂಡ ಮುಸ್ಲಿಂ ಯುವಕನಿಗೆ ಮಾರಣಾಂತಿಕ ಹಲ್ಲೆ
Wednesday, May 3, 2023
ಪುತ್ತೂರು: ಹಿಂದೂ ಯುವತಿಯೊಂದಿಗೆ ಕಾಣಿಸಿಕೊಂಡ ಮುಸ್ಲಿಂ ಯುವಕನಿಗೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ನಗರದ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಮಹಮ್ಮದ್ ಫಾರಿಸ್ (18) ಹಲ್ಲೆಗೊಳಗಾದ ವಿದ್ಯಾರ್ಥಿ.
ಮಹಮ್ಮದ್ ಫಾರಿಸ್ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಸಿನಿಮಾ ವೀಕ್ಷಣೆಗೆಂದು ಬಂದಿದ್ದ. ಆ ಬಳಿಕ ಅಲ್ಲಿಯೇ ಇಬ್ಬರೂ ಜ್ಯೂಸ್ ಕುಡಿಯುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭ ಸುಮಾರು 15 ಮಂದಿಯ ತಂಡವೊಂದು ಅಲ್ಲಿಗೆ ಆಗಮಿಸಿ ಆತನ ಹೆಸರು ಕೇಳಿ ಬಳಿಕ ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಗಂಭೀರವಾಗಿ ಹಲ್ಲೆಗೊಳಗಾಗಿರುವ ಮಹಮ್ಮದ್ ಫಾರಿಸ್ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ನಾನು ಮತ್ತು ಸಹಪಾಠಿ ವಿದ್ಯಾರ್ಥಿನಿ ಜ್ಯೂಸ್ ಕುಡಿಯುತ್ತಿದ್ದ ವೇಳೆ ಅಲ್ಲಿಗೆ ಬಂದ ಸುಮಾರು 15 ಮಂದಿ ಪುತ್ತೂರಿನ ಐಟಿಐ ವಿದ್ಯಾರ್ಥಿಗಳು ನನ್ನ ಹೆಸರು ಕೇಳಿದ್ದಾರೆ. ನಾನು ಹೆಸರು ಹೇಳಿದ ಬಳಿಕ ನಿನ್ನಲ್ಲಿ ಮಾತನಾಡಲಿದೆ ಎಂದು ನನ್ನನ್ನು ರೂಂ ಒಂದಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸುಮಾರು 50 ಮಂದಿ ಸೇರಿಕೊಂಡು ನನ್ನ ಮೇಲೆ ವೈರ್ ಮತ್ತು ಲಾಠಿಯಿಂದ ಹಲ್ಲೆ ಮಾಡಿದ್ದಾರೆ. ಜೊತೆಗೆ ಕಬ್ಬಿಣ ಬಿಸಿ ಮಾಡಿ ಮೈಮೇಲೆ ಬರೆ ಹಾಕಿದ್ದಾರೆ. ಬಳಿಕ ಪೊಲೀಸ್ ದೂರು ನೀಡಿದರ ಕೊಲೆ ಮಾಡುತ್ತೇವೆ. ನಿನ್ನ ಮೇಲೆ ಪೊಕ್ಸೊ ಕಾಯ್ದೆ ದಾಖಲಾಗುವಂತೆ ಮಾಡುತ್ತೇವೆ ಎಂದು ಹೆದರಿಸಿದ್ದಾರೆ' ಎಂದು ಗಾಯಾಳು ಫಾರಿಸ್ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆಗೆ ದೂರು ನೀಡಲಾಗಿದೆ.