ಪತ್ನಿಯನ್ನು ಕಾಪಾಡಲು ಬಂದ ಪೊಲೀಸ್ ಅಧಿಕಾರಿಯ ಮೂಗು ಮುರಿದ ಪತಿ
Tuesday, May 16, 2023
ಕೊಟ್ಟಾಯಂ: ಕೋಣೆಯಲ್ಲಿ ಕೂಡಿ ಹಾಕಿರುವ ಪತ್ನಿಯನ್ನು ಬಿಡಿಸಲೆಂದು ಬಂದ ಪೊಲೀಸ್ ಅಧಿಕಾರಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿ ಮೂಗು ಮುರಿದು ಪರಾರಿಯಾಗಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.
ಪಾಂಪಡಿ ಪೊಲೀಸ್ ಠಾಣೆಯ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಜಿಬಿನ್ ಲೋಬೋ ಹಲ್ಲೆಗೊಳಗಾದವರು. ಪಂಪಾಡಿ ವೆಲ್ಲೂರು ನಿವಾಸಿ ಸ್ಯಾಮ್ ಝಕಾರಿಯಾ (42) ಹಲ್ಲೆ ಮಾಡಿದ ವ್ಯಕ್ತಿ.
ಈತನ ಅನಿರೀಕ್ಷಿತ ದಾಳಿಯಿಂದ ಪೊಲೀಸ್ ಅಧಿಕಾರಿಯ ಮೂಗು ಮುರಿದಿದೆ ಹಾಗೂ ಕಣ್ಣಿನ ರೆಪ್ಪೆಯಲ್ಲಿ ಗಾಯವಾಗಿದೆ. ಆದ್ದರಿಂದ ಅವರನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇ 14ರಂದು ರಾತ್ರಿ 10.15ರ ಸುಮಾರಿಗೆ ಪಂಪಾಡಿಯ ವೆಲ್ಲೂರು 8ನೇ ಮೈಲಿನ ನಿವಾಸವೊಂದರಲ್ಲಿ ಈ ಘಟನೆ ನಡೆದಿದೆ. 'ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನನ್ನು ಕೋಣೆಯೊಳಗೆ ಕೂಡಿ ಹಾಕಿ, ಬೀಗ ಹಾಕಲಾಗಿದೆ' ಎಂದು ಆರೋಪಿ ಸ್ಯಾಮ್ ಝಕಾರಿಯಾ ಪತ್ನಿ ಬಿನಿ ಎಂಬಾಕೆ ಪಂಪಾಡಿ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದರು. ತಕ್ಷಣ ಗ್ರೇಡ್ ಎಸ್ಐ ರಾಜೇಶ್, ಎಸ್‌ಸಿಪಿಒ ಜಿಬಿನ್ ಮತ್ತು ಹೋಂಗಾರ್ಡ್ ಜಯಕುಮಾರ್ ಸಂತ್ರಸ್ತೆಯ ಮನೆಗೆ ತೆರಳಿದ್ದಾರೆ.
ಈ ವೇಳೆ ಪೊಲೀಸ್ ಅಧಿಕಾರಿ ಬಿನಿಯವರನ್ನು ಕೂಡಿ ಹಾಕಿದ್ದ ಕೊಠಡಿಯ ಬಾಗಿಲು ತೆರೆಯಲು ಯತ್ನಿಸುತ್ತಿದ್ದಾಗ ಆರೋಪಿ ಸ್ಯಾಮ್, ಜಿಬಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆರೋಪಿ, ಪೊಲೀಸರಾದ ರಾಜೇಶ್ ಮತ್ತು ಜಯಕುಮಾರ್ ಅವರನ್ನು ತಳ್ಳಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ದಾಳಿಯಿಂದ ಪೊಲೀಸ್ ಅಧಿಕಾರಿ ಜಿಬಿನ್ ಅವರ ಕಣ್ಣಿನ ರೆಪ್ಪೆಯ ಮೇಲೆ ಗಾಯವಾಗಿದ್ದು, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ.
ಬಿನಿ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಎರಡು ವರ್ಷಗಳ ಹಿಂದೆ ಸ್ಯಾಮ್‌ನನ್ನು ವಿವಾಹವಾದ್ದರು. ಆಕೆಗೆ ಮೊದಲ ಪತಿಯಿಂದ ಮೂವರು ಮಕ್ಕಳಿದ್ದಾರೆ. ಯಾವುದೇ ಮಕ್ಕಳನ್ನು ಮನೆಗೆ ಕರೆತರುವುದಿಲ್ಲ ಎಂಬ ಷರತ್ತಿನ ಆಧಾರದಲ್ಲಿ ಸ್ಯಾಮ್, ಬಿನಿಯನ್ನು ಮದುವೆಯಾದಳು.
ಆದರೆ, ಇತ್ತೀಚೆಗೆ ಬಿನಿ, ತನ್ನ ಮೂರನೇ ಪುತ್ರನಿಗೆ ಅನಾರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಮನೆಗೆ ಕರೆತಂದಾಗ ಪತಿ - ಪತ್ನಿಯ ನಡುವೆ ಸಮಸ್ಯೆಗಳು ಪ್ರಾರಂಭವಾಗೊದೆ. ತನ್ನನ್ನು ಮನೆಯಿಂದ ಹೊರಹಾಕದಂತೆ ನ್ಯಾಯಾಲಯದಿಂದ ರಕ್ಷಣೆ ಆದೇಶವನ್ನು ಬಿನಿ ಪಡೆದಿದ್ದರು. ಆದರೂ ಆಕೆಗೆ ಆತ ಹಿಂಸೆ ಕೊಡುತ್ತಿದ್ದ. ಆರೋಪಿ ಸ್ಯಾಮ್ ಕೊಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.