ಸಿಎಂ ಇದ್ದ ವೇದಿಕೆಗೆ ಒಂದು ವರ್ಷದ ಶಿಶುವನ್ನು ಎಸೆದದ್ದರಿಂದ ಪರಿಹಾರವಾಯ್ತು ವ್ಯಕ್ತಿಯ ಸಮಸ್ಯೆ
Tuesday, May 16, 2023
ಭೋಪಾಲ್: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಇದ್ದ ವೇದಿಕೆಗೆ ಒಂದು ವರ್ಷದ ಶಿಶುವನ್ನು ಎಸೆದು ತಂದೆಯೋರ್ವನು ಅಸಹಾಯಕತೆ ಹೊರಹಾಕಿರುವ ಘಟನೆಯೊಂದು ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ತನ್ನ ಒಂದು ವರ್ಷದ ಶಿಶುವಿನ ಚಿಕಿತ್ಸೆಗೆ ಹಣವನ್ನು ಭರಿಸಲಾಗದೇ ಈ ರೀತಿ ಮಾಡಿದ್ದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ಕೂಲಿ ಕಾರ್ಮಿಕನಾಗಿರುವ ಮುಖೇಶ್ ಪಟೇಲ್ ಹಾಗೂ ಆತನ ಪತ್ನಿ ನೇಹಾ ತಮ್ಮ ಹಸುಗೂಸು ನರೇಶ್‌ನೊಂದಿಗೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭಾಗವಹಿಸುವ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅಲ್ಲಿ ಶಿಶುವನ್ನು ವೇದಿಕೆಗೆ ಮುಖೇಶ್ ಪಟೇಲ್ ಎಸೆದಿದ್ದಾನೆ.
ವೇದಿಕೆ ಮೇಲೆ ಬಿದ್ದು ಮಗು ಅಳುತ್ತಿರುವುದನ್ನು ಗಮನಿಸಿದ ಶಿವರಾಜ್ ಸಿಂಗ್ ಚೌಹಾಣ್ ಒಂದು ಕ್ಷಣಕ್ಕೆ ದಿಗ್ರಮೆಗೊಂಡಿದ್ದಾರೆ. ಬಳಿಕ ಮಗುವಿನ ಹೆತ್ತವರನ್ನು ತಮ್ಮ ಬಳಿ ಕರೆಸಿಕೊಂಡು ಮಾಹಿತಿ ಪಡೆದರು. ತಮ್ಮ ಶಿಶುವಿನ ಜೀವ ಉಳಿಸುವ ಸಲುವಾಗಿ ಈ ರೀತಿ ಮಾಡಬೇಕಾಯಿತು. ವೇದಿಕೆ ಮೇಲೆ ಎಸೆದ ನನ್ನ ಮಗುವಿನ ಹೃದಯದಲ್ಲಿ ಒಂದು ಚಿಕ್ಕ ರಂಧ್ರವಿದೆ ಅದರ ಚಿಕಿತ್ಸೆಗೆ ದುಡ್ಡು ಭರಿಸಲು ಆಗದೇ ಮುಖ್ಯಮಂತ್ರಿಗಳ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ.
ಕುಟುಂಬಸ್ಥರಿಂದ ಮಾಹಿತಿ ಪಡೆದ ಸಿಎಂ ಈ ರೀತಿ ಮಾಡದಂತೆ ಬುದ್ದಿವಾದ ಹೇಳಿ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ವಿವರವನ್ನು ತಮ್ಮ ಕಚೇರಿ ಸಿಬ್ಬಂದಿಗೆ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.