ಮಂಗಳೂರು: ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಹಾಕಿ ಬಜರಂಗದಳ ಪ್ರತಿಭಟನೆ
Tuesday, May 2, 2023
ಮಂಗಳೂರು: ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡುವ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನೇ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ಬಜರಂಗದಳದ ಕಾರ್ಯಕರ್ತರು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಪ್ರತಿಗಳನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಜರಂಗದಳ ಮಂಗಳೂರು ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಮಾತನಾಡಿ, ಈ ಪ್ರತಿಭಟನೆ ಕೇವಲ ಆರಂಭವಷ್ಟೇ, ಬಜರಂಗದಳವನ್ನು ನಿಷೇಧಿಸಿ ಅದರ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ಮಟ್ಟ ಹಾಕುತ್ತೇವೆ ಎಂದು ಕಾಂಗ್ರೆಸ್ ನಿರ್ಧರಿಸಿದ್ದರೆ ಅದು ಕೇವಲ ಭ್ರಮೆಯಷ್ಟೇ. ಬಜರಂಗದಳ ಆರಂಭವಾದದ್ದೇ ಸಂಘರ್ಷದಿಂದ, ಸಂಘರ್ಷಕ್ಕಾಗಿಯೇ. ಬಜರಂಗದಳ ಎಂದಿಗೂ ದೇಶ ವಿರೋಧಿ ಕೃತ್ಯ ನಡೆಸಿಲ್ಲ. ಅಮಾಯಕರ ಮೇಲೆ ಹತ್ಯೆ ಮಾಡಿಲ್ಲ, ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟಿಲ್ಲ. ಆದರೂ ಬಜರಂಗದಳ ನಿಷೇಧ ಮಾಡುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದ ಬಜರಂಗದಳದ ಕಾರ್ಯಕರ್ತರು ಏನು ಮಾಡುತ್ತಾರೆಂಬುದು ಈ ಚುನಾವಣಾ ಫಲಿತಾಂಶದಲ್ಲಿ ತಿಳಿದು ಬರಲಿದೆ. ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್ ಅನ್ನು ಮಟ್ಟ ಹಾಕುತ್ತೇವೆ ಎಂದು ಹೇಳಿದರು.