ಯುವತಿಯ ಅಪಹರಣಕ್ಕೆ ಬಿಗ್ ಟ್ವಿಸ್ಟ್: ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಆಡಿದ್ದಳೇ ನಾಟಕ
Tuesday, May 16, 2023
ಶಿವಮೊಗ್ಗ: ದಾವಣಗೆರೆ ಮೂಲದ ರಂಜಿತಾ(20) ಎಂಬ ಯುವತಿಯ ಅಪಹರಣ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ದೊರಕಿದೆ. ನಿಜಕ್ಕಾದರೂ ಈಕೆಯ ಅಪಹರಣ ಆಗಲೇ ಇಲ್ಲ. ಮತಾಂತರಗೊಳ್ಳಲು ಹೊರಟ ಈಕೆ ಅಪಹರಣದ ಕಥೆಯನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗಲು ಮುಂಬೈಗೆ ಹೊರಟಿದ್ದ ಯುವತಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಇದೀಗ ಸುರಕ್ಷಿತವಾಗಿ ಪಾಲಕರ ಸುಪರ್ದಿಗೆ ಒಪ್ಪಿಸಿದ್ದಾರೆ.
ತನ್ನ ಪುತ್ರಿ ರಂಜಿತಾಳನ್ನು ಯಾರೋ ಅಪಹರಣ ಮಾಡಿದ್ದಾರೆ. ಅಲ್ಲದೆ ಅಪಹರಣಕಾರ 20 ಲಕ್ಷ ರೂಪಾಯಿಗೆ ದುಷ್ಕರ್ಮಿಗಳು ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ಮುಂದೆ ಆಗುವ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಆಕೆಯ ಪಾಲಕರು ದೂರು ನೀಡಿದ್ದರು.
ಇದೀಗ ಜಯನಗರ ಪೊಲೀಸರ ತನಿಖೆಯಿಂದ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರಕಿದೆ. ಕ್ರಿಶ್ಚಿಯನ್ ಧರ್ಮದಿಂದ ತೀವ್ರ ಪ್ರಭಾವಿತಳಾದ ರಂಜಿತಾ, ಮಂತಾತರಗೊಳ್ಳಲು ಮುಂದಾಗಿದ್ದಾಳೆ. ಆದ್ದರಿಂದ ಮತಾಂತರದ ನಾಟಕವಾಡಿದ್ದಾಳೆಂಬುದು ಬಹಿರಂಗವಾಗಿದೆ.
ಚೆನ್ನಗಿರಿಯ ನವಚೇತನ ಕ್ರಿಶ್ಚಿಯನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ರಂಜಿತಾ, ಹೈಸ್ಕೂಲ್ ಮಾಡುತ್ತಿದ್ದ ಕಾಲದಿಂದಲೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಒಲವು ಹೊಂದಿದ್ದಳು. ಪಿಯುಸಿ ಬಳಿಕ ಫಿಸಿಯೋಥೆರಫಿ ವ್ಯಾಸಾಂಗಕ್ಕೆ ಶಿವಮೊಗ್ಗದ ನರ್ಸಿಂಗ್ ಕಾಲೇಜು ಸೇರಿದ್ದಳು. ಈ ವೇಳೆ ಕೇರಳ ಮೂಲದ ಕ್ರಿಶ್ಚಿಯನ್ ವಿದ್ಯಾರ್ಥಿನಿಯರ ಸಂಪರ್ಕದಿಂದ ಪ್ರಭಾವಿತಳಾಗಿದ್ದಳು. ಇದೇ ಕಾರಣಕ್ಕೆ ಮುಂಬೈಗೆ ಹೋಗಿ ಮತಾಂತರಗೊಂಡು, ಅಲ್ಲಿನ ಕ್ಯಾಥೊಲಿಕ್ ಚರ್ಚ್‌ಗೆ ಸೇರಿ, ಸನ್ಯಾಸಿನಿಯಾಗಿ ಸೇವೆ ಮಾಡಲು ರಂಜಿತಾ ನಿರ್ಧರಿಸಿದ್ದಳು.
ಮುಂಬೈನಲ್ಲಿ ವಾಸಿಸಲು ಹಣದ ಅವಶ್ಯಕತೆಯಿದ್ದ ಹಿನ್ನೆಲೆಯಲ್ಲಿ ರಂಜಿತಾ ಅಪಹರಣದ ಕಥೆಯನ್ನು ಕಟ್ಟಿದ್ದಾಳೆ. ಪಾಲಕರಿಗೆ ತನ್ನ ಮೊಬೈಲ್‌ನಿಂದಲೇ ಕರೆ ಮಾಡಿ 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಬಳಿಕ 5 ಸಾವಿರ ಹಣ ಡ್ರಾ ಮಾಡಿ, ಶಿವಮೊಗ್ಗ- ತೀರ್ಥಹಳ್ಳಿ- ಶೃಂಗೇರಿ-ಬೆಂಗಳೂರು ಮೂಲಕ ರಂಜಿತಾ ಹುಬ್ಬಳಿಗೆ ತೆರಳಿದ್ದಾಳೆ. ಹುಬ್ಬಳ್ಳಿಯಿಂದ ಮುಂಬೈಗೆ ಹೋಗಲು ತಯಾರಿ ಮಾಡಿಕೊಂಡಿದ್ದ ರಂಜಿತಾಳನ್ನು ಪೊಲೀಸರು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಕೌನ್ಸೆಲಿಂಗ್ ಬಳಿಕ ಜಯನಗರ ಪೊಲೀಸರು ಪಾಲಕರಿಗೆ ಒಪ್ಪಿಸಿದ್ದಾರೆ.