ಮಂಗಳೂರು: ಗಮನಿಸಿ ಮಂಗಳೂರಿಗಿನ್ನು ಎರಡು ದಿನಕ್ಕೊಮ್ಮೆ ನೀರು - ಹೆಚ್ಚಿನ ಮಾಹಿತಿಗೆ ಈ ಸುದ್ದಿ ನೋಡಿ
Wednesday, May 3, 2023
ಮಂಗಳೂರು: ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿರುವುದರಿಂದ ಮತ್ತು ಬೇಸಿಗೆ ಬಿರು ಬಿಸಿಲಿನಿಂದಾಗಿ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಆದ್ದರಿಂದ ಸಾರ್ವಜನಿಕರಿಗೆ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 4ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡುವುದು ಅನಿವಾರ್ಯವಾಗಿರುತ್ತದೆ.
ಈ ಬಗ್ಗೆ ಸಾಧಕ ಭಾದಕಗಳನ್ನು ಪರಿಶೀಲಿಸಿ ಜಿಲ್ಲಾಡಳಿತದ ಸಭೆಯಲ್ಲಿ ಈ ಕೆಳಗಿನಂತೆ ನಿರ್ಣಯಗಳನ್ನು ಕೈಗೊಳ್ಳಲಾಗಿರುತ್ತದೆ. ಲಭ್ಯವಿರುವ ನೀರನ್ನು ಮಂಗಳೂರು ನಗರ ಪ್ರದೇಶಕ್ಕೆ (ಮಂಗಳೂರು ನಗರ ದಕ್ಷಿಣ) ಮತ್ತು ಸುರತ್ಕಲ್ ಪ್ರದೇಶಕ್ಕೆ (ಮಂಗಳೂರು ನಗರ ಉತ್ತರ ಭಾಗಕ್ಕೆ) ಪರ್ಯಾಯ ದಿನಗಳಲ್ಲಿ ನೀರು ಬಿಡಲು ನಿರ್ಣಯಿಸಲಾಗಿದೆ.
ಕಟ್ಟಡ ರಚನೆ, ಇತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್ ಗಳ ಜೋಡಣೆಯನ್ನು ಮುಂದಿನ ಸೂಚನೆಯವರೆಗೆ ಕಡಿತಗೊಳಿಸಲಾಗುತ್ತದೆ. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ, ಜೋಡಣೆಯನ್ನು ಕಡಿತಗೊಳಿಸುವುದು. ಮೇ 5 ರಂದು ಮಂಗಳೂರು ನಗರ ಉತ್ತರಕ್ಕೆ, ಮೇ 6ರಂದು ಮಂಗಳೂರು ನಗರ ದಕ್ಷಿಣಕ್ಕೆ ನೀರು ಸರಬರಾಜು ಆಗಲಿದೆ. ಆ ಬಳಿಕ ಕ್ರಮಾನುಗತವಾಗಿ ಮೇಲೆ ತಿಳಿಸಿದಂತೆ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿರುತ್ತದೆ. ಲಭ್ಯವಿರುವ ನೀರನ್ನು ಮೇಲೆ ತಿಳಿಸಿದಂತೆ ಪೂರೈಕೆ ಮಾಡುವುದು ಅನಿವಾರ್ಯವಾಗಿದ್ದು ಸಾರ್ವಜನಿಕರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಕೋರಲಾಗಿದೆ.