ಆಗತಾನೇ ವಿವಾಹವಾದ ನವವಧು ದಾರುಣವಾಗಿ ಅಂತ್ಯ: ವರ ಗಂಭೀರ
Wednesday, May 3, 2023
ನ್ಯೂಯಾರ್ಕ್: ಕಂಠಪೂರ್ತಿ ಕುಡಿದು ಅತಿ ವೇಗವಾಗಿ ವಾಹನ ಚಲಾಯಿಸಿದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಆಗ ತಾನೆ ವಿವಾಹವಾದ ನವವಧು ದಾರುಣವಾಗಿ ಅಂತ್ಯ ಕಂಡಿದ್ದಾಳೆ. ವರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಭೀಕರ ಘಟನೆ ನ್ಯೂಯಾರ್ಕ್‌ನ ಸೌತ್ ಕೆರೋಲಿನಾದಲ್ಲಿ ನಡೆದಿದೆ. ನವ ವಧು-ವರರಿಬ್ಬರು ಆರತಕ್ಷತೆ ಮುಗಿಸಿಕೊಂಡು ವಾಪಸ್ ಆಗುವ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಮಂತಾ ಹಚಿನ್‌ಸನ್(34) ನವವಧು ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಇವರ ಪತಿ ಆರಿಕ್ ಹಚಿನ್‌ಸನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರಂತಕ್ಕೆ ಕಾರಣವಾದ ಆರೋಪಿತೆ ಜೇಮೀ ಕೊಮೊರೊಸ್ಕಿ(25)ಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಸಮಂತಾ ಹಚಿನ್‌ಸನ್ ಹಾಗೂ ಆರಿಕ್ ಹಚಿನ್‌ಸನ್ ಆರತಕ್ಷತೆ ಮುಗಿಸಿಕೊಂಡು ಗಾಲ್ಫ್ ಕಾರ್ಟ್ ವಾಹನದಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ವಾಹನವೊಂದು ವಧು - ವರರಿದ್ದ ವಾಹನಕ್ಕೆ ಡಿಕ್ಕಿಯಾಗಿದೆ. ಹಿಂಬದಿಯಲ್ಲಿದ್ದ ವಾಹನ ವೇಗವಾಗಿ ಗುದ್ದಿದ ರಭಸಕ್ಕೆ ಗಾಲ್ಫ್ ಕಾರ್ಟ್ ವಾಹನವು ಅನೇಕ ಬಾರಿ ಪಲ್ಟಿ ಹೊಡೆದು 100 ಯಾರ್ಡ್‌ಗಿಂತಲೂ ಮುಂದಕ್ಕೆ ಬಿದ್ದಿದೆ ಎಂದು ವರನ ತಾಯಿ ಹೇಳಿದ್ದಾರೆ.
ಅಪಘಾತದ ಗಂಭೀರತೆಗೆ ವಧು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರಿಕ್‌ಗೆ ಎರಡರಿಂದ ಮೂರು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿರುವುದಾಗಿ ಅವರ ತಾಯಿ ತಿಳಿಸಿದ್ದಾರೆ.
ಇನ್ನು ಸಮಂತಾ ಹಾಗೂ ಆರಿಕ್ ಮದುವೆಯಾದ ಕೆಲವೇ ಘಂಟೆಗಳಲ್ಲಿ ಘಟನೆ ಸಂಭವಿಸಿದ್ದು ಅತ್ಯಂತ ದುರದೃಷ್ಟಕರವಾಗಿದೆ. ಆರೋಪಿತೆ ಕಂಠಪೂರ್ತಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಇದೀಗ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದಾರೆ.