ಮನೆಯಲ್ಲಿ ಮಗು ಮಲಗಿದ್ದರೂ ಪೊಲೀಸರೊಂದಿಗೆ ಎಲ್ಲಾ ಕಡೆ ಹುಡುಕಾಡಿದ ಬೇಜವಾಬ್ದಾರಿ ಪೋಷಕರು
Friday, May 12, 2023
ಬೆಂಗಳೂರು: ಆಧುನಿಕ ಯುಗದ ಬ್ಯುಸಿ ಲೈಫ್ ನಲ್ಲಿ ಕೆಲಸವೆಂದು ಸಮಯ ಕಳೆಯುತ್ತಾ ಮಕ್ಕಳು, ಪತಿ, ಪತ್ನಿಗೆ ಸಮಯ ಕೊಡಲಾಗದಷ್ಟು ಗಡಿಬಿಡಿಯ ಜೀವನ ನಮ್ಮದಾಗಿದೆ. ಇದು ಕೆಲವೊಮ್ಮೆ ನಮ್ಮ ಬೇಜವಾಬ್ದಾರಿ ದೊಡ್ಡ ಅವಾಂತರವನ್ನು ಸೃಷ್ಟಿ ಮಾಡುತ್ತದೆ ಎನ್ನುವುದಕ್ಕೆ ಪೂರಕವಾಗಿ ಒಂದು ಘಟನೆ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರದ ಜನತಾ ಕಾಲನಿಯ ನಿವಾಸಿಯಾದ ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಪುತ್ರಿಗಾಗಿ ಪೊಲೀಸರೊಂದಿಗೆ ಸೇರಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್ ಬಂದಾಗ ಮಗು ಮನೆಯಲ್ಲೇ ಇರುವುದನ್ನು ಕಂಡು ನಿಟ್ಟುಸಿರುಬಿಟ್ಟಿದ್ದಾರೆ.
ಮೀನಾ ದಂಪತಿ ತಮ್ಮ ಪುತ್ರಿ ಮನೆಯಲ್ಲಿ ಇರದಿರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ತಮ್ಮ ಮಗು ಕಿಡ್ನ್ಯಾಪ್ ಆಗಿದೆ ಎಂದು ಮೇ 11ರಂದು ರಾತ್ರಿ 7.30ಕ್ಕೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಗು ಮನೆ ಮುಂದೆ ಆಟವಾಡುತ್ತಿದಾಗ ಕಾಣೆಯಾಗಿದೆ ಎಂದು ದೂರು ನೀಡಿದ್ದಾರೆ. ಪುತ್ರಿಯನ್ನು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಸಿಗಲಿಲ್ಲ. ಹೀಗಾಗಿ ದೂರು ನೀಡಲು ಬಂದಿದ್ದೇವೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ. ತಕ್ಷಣ ಪೊಲೀಸರು ಹುಡುಕಾಟ ಆರಂಭಿಸಿದರು. ಪೊಲೀಸರ ಜೊತೆ ಮಗಳಿಗಾಗಿ ಪೋಷಕರು ಅಕ್ಕಪಕ್ಕದ ಏರಿಯಾಗಳಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ.
ಪೊಲೀಸರು ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿ, ಬಳಿಕ ಕಿಡ್ನಾಪ್ ಆದ ಸ್ಥಳದಲ್ಲಿ ಏನಾದರೂ ಮಾಹಿತಿ ದೊರಕಬಹುದೇ ಎಂದು ಮನೆಗೆ ಬಂದು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯಲ್ಲೇ ಮಗು ನಿದ್ದೆ ಮಾಡುತ್ತಿರುವುದು ಅವರಿಗೆ ತಿಳಿದುಬಂದಿದೆ. ಮನೆಯಲ್ಲಿ ಗುಡ್ಡೆ ಹಾಕಿದ್ದ ಬಟ್ಟೆಗಳಡಿಯಲ್ಲಿ ತಮ್ಮ ಪುತ್ರಿ ಮಲಗಿರುವುದನ್ನು ಕಂಡು ಮೀನಾ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ.
ಪುತ್ರಿ ಮಲಗಿದಾಗ ತಾಯಿ ಒಣಗಿದ್ದ ಬಟ್ಟೆಯನ್ನು ಆಕೆಯ ಮೇಲೆ ತಂದು ಹಾಕಿದ್ದಾರೆ. ಮಗು ಮಲಗಿ ಚೆನ್ನಾಗಿ ನಿದ್ರಿಸುತ್ತಿತ್ತು. ತಾಯಿ ಬಟ್ಟೆ ಹಾಕಿದ್ರೂ ಎಚ್ಚರಗೊಡಿರಲಿಲ್ಲ. ಪೋಷಕರ ಬೇಜಾವಾಬ್ದಾರಿಗೆ ಪೊಲೀಸರು ಸುಸ್ತೋ ಸುಸ್ತೋ.