ಪ್ರವೀಣ್ ನೆಟ್ಟಾರು ಪತ್ನಿಯ ಉದ್ಯೋಗ ಮರು ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಸ್ಪಂದನೆ
Sunday, May 28, 2023
ಬೆಂಗಳೂರು: ನೂತನ ರಾಜ್ಯ ಸರಕಾರ ತಾತ್ಕಾಲಿಕ ನೇಮಕಾತಿ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರು ಪತ್ನಿಯ ಉದ್ಯೋಗಕ್ಕೆ ಕತ್ತರಿ ಬಿದ್ದಿತ್ತು. ಈ ಬಗ್ಗೆ ಎಲ್ಲಾ ಮಾಧ್ಯಮಗಳು ಸುದ್ದಿ ಬಿತ್ತರಿಸಿತ್ತು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರು ಅನುಕಂಪದ ಆಧಾರದಲ್ಲಿ ನೂತನ ಕುಮಾರಿಯವರನ್ನು ಮರು ನೇಮಕಾತಿ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯನವರನ್ನು ವಿನಂತಿಸಿದ್ದರು. ಇದೀಗ ಈ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದು, ಪ್ರವೀಣ್ ಪತ್ನಿಯನ್ನು ಅದೇ ಹುದ್ದೆಗೆ ಮರು ನೇಮಕ ಮಾಡಿಕೊಳ್ಳಲು ಆದೇಶಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹೊಸ ಸರಕಾರ ಬಂದ ನಂತರ ಹಿಂದಿನ ಸರಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರನ್ನು ಮರು ನೇಮಕ ಮಾಡಲಾಗುವುದು" ಎಂದಿದ್ದಾರೆ.
ನೂತನ ಸರಕಾರ ಬರುತ್ತಿದ್ದಂತೆ ಹಿಂದಿನ ಬಿಜೆಪಿ ಸರಕಾರ ಮಾಡಿದ್ದ ಎಲ್ಲ ರೀತಿಯ ತಾತ್ಕಾಲಿಕ ನೇಮಕಾತಿಯನ್ನು ರದ್ದುಪಡಿಸಲಾಗಿತ್ತು. ಅದರಂತೆ, ದಿ.ಪ್ರವೀಣ್ ನೆಟ್ಟಾರು ಅವರ ಪತ್ನಿಯ ಉದ್ಯೋಗಕ್ಕೂ ಕತ್ತರಿ ಬಿದ್ದಿತ್ತು. ಉದ್ಯೋಗ ನೇಮಕಾತಿ ಸಂದರ್ಭ ಸಿಎಂ ಪದಾಧಿಕಾರ ಇರುವವರೆಗೆ ಎಂದು ಉಲ್ಲೇಖ ಮಾಡಲಾಗಿತ್ತು. ಇದೇ ಕಾರಣಕ್ಕೆ ನೂತನ ಕುಮಾರಿ ಉದ್ಯೋಗ ಕಳೆದುಕೊಳ್ಳುವಂತಾಗಿತ್ತು.