ಫೋನ್ ನಂಬರ್ ಗಾಗಿ ಶಾಲಾ ಬಾಲಕಿಯ ಹಿಂದೆ ಬಿದ್ದ ಪೊಲೀಸ್ ಕಾನ್ ಸ್ಟೇಬಲ್
Sunday, May 7, 2023
ಲಖನೌ: ಉತ್ತರಪ್ರದೇಶದ ಲಖನೌದಲ್ಲಿ ಶಾಲಾ ಬಾಲಕಿಯನ್ನು ಪೊಲೀಸ್ ಕಾನ್ ಸ್ಟೇಬಲ್ ಓರ್ವನು ನಡು ರಸ್ತೆಯಲ್ಲೇ ಚುಡಾಯಿಸಿ ಕಿರುಕುಳ ನೀಡಿರುವ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಈ ಆಘಾತಕಾರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಲಾ ವಿದ್ಯಾರ್ಥಿನಿ ಸೈಕಲ್ ಸವಾರಿ ಮಾಡುತ್ತಾ ಶಾಲೆಗೆ ತೆರಳುತ್ತಿದ್ದಳು. ಈ ವೇಳೆ ಪೊಲೀಸ್ ಕಾನ್ ಸ್ಟೇಬಲ್ ಓರ್ವನು ಆಕೆಯನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸುತ್ತಿರುವುದು ವಿಡಿಯೋದಲ್ಲಿದೆ. ಈ ದೃಶ್ಯವನ್ನು ಯಾರೋ ದಾರಿಹೋಕರು ರೆಕಾರ್ಡ್ ಮಾಡಿದ್ದಾರೆ. ಪೊಲೀಸ್ ಸಮವಸ್ತ್ರದಲ್ಲೇ ಕಾನ್ ಸ್ಟೇಬಲ್ ಈ ಕೃತ್ಯ ಎಸಗಿದ್ದಾನೆ. ಬಾಲಕಿಯನ್ನು ಚುಡಾಯಿಸುತ್ತಿರುವುದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಆಗ ಆಕೆ ತನ್ನ ಸ್ನೇಹಿತನ ಮಗಳು ಎಂದು ಸಬೂಬು ಹೇಳಿದ್ದಾನೆ.
ಈ ಘಟನೆ ಕಳೆದ ಮಂಗಳವಾರ ನಡೆದಿದ್ದು, ಬುಧವಾರ ವೀಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ. ವೀಡಿಯೋ ಆಧಾರದ ಮೇಲೆ ಕಾಂಟ್ ಪೊಲೀಸ್ ಠಾಣೆಯಲ್ಲಿ ಆರೋಪಿ ಪೊಲೀಸ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಬಂಧನವೂ ಆಗಿದೆ. ಬಂಧಿತ ಕಾನ್ಸ್ಟೆಬಲ್ ಹೆಸರು ಶಹದತ್ ಅಲಿ. ವಿಡಿಯೋದಲ್ಲಿ ಸ್ಕೂಟರ್ ಮೇಲೆ ನಂಬರ್ ಪ್ಲೇಟ್ ಇಲ್ಲದಿರುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ಕೆಲವು ದಿನಗಳಿಂದ ಶಹದತ್ ಅಲಿ ಶಾಲಾ ವಿದ್ಯಾರ್ಥಿನಿಯ ಹಿಂದೆ ಬಿದ್ದು, ಕಿರುಕುಳ ನೀಡುತ್ತಿರುವುದು ತಿಳಿದುಬಂದಿದೆ. ಆರೋಪಿಯನ್ನು ಮೋಹನ್‌ಲಾಲ್‌ಗಂಜ್ ಪೊಲೀಸ್ ಠಾಣೆಗೆ ಪೋಸ್ಟಿಂಗ್ ಮಾಡಲಾಗಿತ್ತು. ಆ ಬಳಿಕದಿಂದ ಆತ ಶಾಲಾ ಬಾಲಕಿಯ ಮೊಬೈಲ್ ನಂಬರ್‌ಗಾಗಿ ದುಂಬಾಲು ಬಿದಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.