ಕಾಡಾನೆ ದಾಳಿಗೆ ಮಹಿಳೆ ಬಲಿ : ಯಾರಿಗೂ ತಿಳಿಯದಂತೆ ಮೃತದೇಹ ಕೊಂಡೊಯ್ಯಲು ಅರಣ್ಯಾಧಿಕಾರಿಗಳ ಒತ್ತಡ
Saturday, May 27, 2023
ಬೆಂಗಳೂರು: ಕಾಡಾನೆ ದಾಳಿ ಮಾಡಿ ತುಳಿದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆಯೊಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲನಿಯಲ್ಲಿ ನಡೆದಿದೆ.
ಮಹದೇವಮ್ಮ (48) ಎಂಬಾಕೆ ಕಾಡಾನೆ ತುಳಿತಕ್ಕೊಳಗಾಇ ಮೃತಪಟ್ಟ ಮಹಿಳೆ.
ಮಹಾದೇವಮ್ಮ ಮಧ್ಯಾಹ್ನ 2.30ರ ಸುಮಾರಿಗೆ ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಕಾಡಾನೆ ದಾಳಿ ನಡೆಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆ ಕಾಡಾನೆ ದಾಳಿಯಿಂದಲೇ ಮೃತಪಟ್ಟಿದ್ದಾಳೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಯಾರಿಗೂ ತಿಳಿಯದಂತೆ ಮೃತದೇಹವನ್ನು ಕೊಂಡೊಯ್ಯುವಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅರಣ್ಯಾಧಿಕಾರಿಗಳ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣ ಎಂದು ಮಹದೇವಮ್ಮ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.