ಮನೆಯೊಳಗಡೆಯೇ ಪತಿಯ ಅಂತ್ಯಸಂಸ್ಕಾರ ನಡೆಸಿದ ಪತ್ನಿ
Tuesday, May 30, 2023
ನರ್ನೂಲ್: ಮೃತಪಟ್ಟ ಪತಿಗೆ ಪತ್ನಿಯೊಬ್ಬಳು ಮನೆಯೊಳಗಡೆಯೇ ಅಂತ್ಯಸಂಸ್ಕಾರ ನೆರವೇರಿಸಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪತ್ತಿಕೊಂಡದಲ್ಲಿ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಹರಿಕೃಷ್ಣ ಪ್ರಸಾದ್(63) ಸೋಮವಾರ ನಿಧನರಾಗಿದ್ದರು. ಆದರೆ ಪತಿಯ ಸಾವಿನಿಂದ ಆಘಾತಗೊಂಡಿದ್ದ ಅವರ ಪತ್ನಿ ಲಲಿತಾ ಮಾನಸಿಕ ಅಸ್ವಸ್ಥಗೊಂಡು ಪತಿಯ ಅಂತ್ಯಸಂಸ್ಕಾರವನ್ನು ಮನೆಯೊಳಗಡಯೇ ನೆರವೇರಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದ ಪತಿ ಹರಿಕೃಷ್ಣ ಪ್ರಸಾದ್ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದರು. ನೆರೆಹೊರಯವರಿಗೆ ವಿಚಾರ ತಿಳಿಸಿದ್ದರೆ ಯಾರು ಬರುವುದಿಲ್ಲ ಎಂದು ಭಾವಿಸಿದ ಅವರ ಪತ್ನಿ ಲಲಿತಾ ಅವರು ತಮ್ಮ ಇಬ್ಬರು ಪುತ್ರರಿಗೂ ವಿಷಯ ತಿಳಿಸದೆ ಮನೆಯೊಳಗಡೆಯೇ ಅಂತ್ಯಸಂಸ್ಕಾರ ನಡೆಸಲು ಮುಂದಾಗಿದ್ದಾರೆ. ಅದಕ್ಕಾಗಿ ಮನೆಯಲ್ಲಿದ್ದ ಪುಸ್ತಕಗಳನ್ನು ಪತಿಯ ದೇಹದ ಮೇಲೆ ಇಟ್ಟು ಬೆಂಕಿ ಹಚ್ಚಿ ಅಂತ್ಯಕ್ರಿಯೆ ಮಾಡಿದ್ದಾರೆ.
ಈ ಕುರಿತು ನೆರೆಮನೆ ನಿವಾಸಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಮನೆಗೆ ಬಂದು ಪರಿಶೀಲಿಸಿದಾಗ ದೇಹವು ಶೇ 80ರಷ್ಟು ಸುಟ್ಟು ಹೋಗಿತ್ತು. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೆಯವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಎರಡನೆಯವರು ಕೆನೆಡಾದಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯ ಸಾವಿನಿಂದ ಆಘಾತಕ್ಕೊಳಗಾದ ಪತ್ನಿ ಲಲಿತಾ ಮತಿಭ್ರಮಣೆ ಅಥವಾ ದಿಗ್ಭ್ರಮೆಗೊಂಡು ಈ ರೀತಿ ಮಾಡಿರಬಹುದು ಎಂದು ಪತ್ತಿಕೊಂಡ ಪೊಲೀಸ್ ಠಾಣಾಧಿಕಾರಿ ಮುರಳಿ ಮೋಹನ್ ಮಾಹಿತಿ ನೀಡಿದ್ದಾರೆ.