
ಬೆಂಗಳೂರು: ಸೈರನ್ ಮೊಳಗಿಸಿಕೊಂಡೇ ವಿದ್ಯಾರ್ಥಿಯನ್ನು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಹೊಯ್ಸಳ ಸಿಬ್ಬಂದಿ
Tuesday, May 23, 2023
ಬೆಂಗಳೂರು: ಸೈರನ್ ಮೊಳಗಿಸಿಕೊಂಡು ಟ್ರಾಫಿಕ್ ನಿಭಾಯಿಸಿ ಸಕಾಲಕ್ಕೆ ವಿದ್ಯಾರ್ಥಿಯನ್ನು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಹೊಯ್ಸಳ ಪೊಲೀಸ್ ಸಿಬ್ಬಂದಿ ತಲುಪಿಸಿ ಮಾನವೀಯತೆ ಮೆರೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊತ್ತನೂರಿನ ಹೊಯ್ಸಳ ಸಿಬ್ಬಂದಿ ಗೌರೀಶ್ ಹಾಗೂ ಸೋಮಶೇಖರ್ ಈ ಕಾರ್ಯ ಮಾಡಿದವರು. ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿದ್ಯಾರ್ಥಿಯೊಬ್ಬ ಸಿಇಟಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಿತ್ತು. ಆದರೆ, ಶನಿವಾರ ಸಿದ್ದರಾಮಯ್ಯನವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವಿತ್ತು. ಆದ್ದರಿಂದ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ವಿದ್ಯಾರ್ಥಿ ಮನನೊಂದಿದ್ದ.
ವಿದ್ಯಾರ್ಥಿಯನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಸಿಇಟಿ ಪರೀಕ್ಷೆಗೆ ಹೋಗಬೇಕಿತ್ತು. ಆದರೆ ಟ್ರಾಫಿಕ್ ಜಾಮ್‌ನಿಂದಾಗಿ ತನಗೆ ಕ್ಲಪ್ತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಲಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾನೆ. ಈ ವೇಳೆ ಆತನಿಗೆ ಧೈರ್ಯ ತುಂಬಿ, ಹೊಯ್ಸಳ ವಾಹನದಲ್ಲಿ ಕೇವಲ 15 ನಿಮಿಷದಲ್ಲಿ ಕೋರಮಂಗಲದ ಜೆ.ಎನ್.ಸಿ ಕಾಲೇಜಿಗೆ ತಲುಪಿಸುವ ಮೂಲಕ ವಿದ್ಯಾರ್ಥಿಯನ್ನು ಪರೀಕ್ಷೆ ಬರೆಯಲು ಪೊಲೀಸ್ ಸಿಬ್ಬಂದಿ ನೆರವಾಗಿದ್ದಾರೆ .
ಈ ವೇಳೆ ಹೊಯ್ಸಳ ಸಿಬ್ಬಂದಿಯೊಂದಿಗೆ ಸೆಲ್ಫಿ ತೆಗೆದು ವಿದ್ಯಾರ್ಥಿ ಧನ್ಯವಾದ ತಿಳಿಸಿದ್ದಾನೆ. ನಾವು ನಿಮ್ಮ ಸೇವೆಗೆ ಸದಾ ಸಿದ್ಧವಾಗಿರುತ್ತೇವೆ ಎಂದು ಹೊಯ್ಸಳ ಸಿಬ್ಬಂದಿ ಸಹ ಸಾರ್ವಜನಿಕರಿಗೆ ವೀಡಿಯೋ ಮೂಲಕ ಸಂದೇಶ ರವಾನಿಸಿದ್ದು, ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.