ಪಿಯುಸಿ ವಿದ್ಯಾರ್ಥಿನಿ ಅಪಹರಣ: ತನಿಖೆ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್
Monday, May 15, 2023
ಮಧ್ಯಪ್ರದೇಶ: ಪಿಯುಸಿ ವಿದ್ಯಾರ್ಥಿನಿಯೋರ್ವಳು ತನ್ನನ್ನು ಯಾರೋ ಅಪಹರಣ ಮಾಡಿದ್ದಾಗಿ ಹೇಳಿ ತಂದೆಗೆ ಕರೆ ಮಾಡಿದ್ದು, ಪೊಲೀಸರು ಆಕೆಯನ್ನು ಹುಡುಕಾಡಿದಾಗ ಅಲ್ಲಿ ನಡೆದದ್ದೇ ಬೇರೆ. ಆಕೆಯ ಕಟ್ಟಿರುವ ಕಥೆಯನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.
ಹೌದು... ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಇಂದೋರ್‌ನಿಂದ ಉಜ್ಜಯಿನಿಗೆ ಪರಾರಿಯಾಗಿ, ನನ್ನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ತಂದೆಗೆ ಕರೆ ಮಾಡಿ ನಾಟಕವಾಡಿದ್ದಾಳೆ. ಈ ಬಗ್ಗೆ ಆಕೆಯ ತಂದೆ ಪೊಲೀಸ್ ದೂರು ದಾಖಲಿಸಿದ್ದಾರೆ. ಮಾಹಿತಿ ದೊರೆಯುತ್ತಿದ್ದಂತೆ ತನಿಖೆ ನಡೆಸಿದ ಪೊಲೀಸರು ವಿದ್ಯಾರ್ಥಿನಿಯ ಪತ್ತೆಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ. ಬಳಿಕ ಇಂದೋರ್‌ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಉಜ್ಜಯಿನಿಯಲ್ಲಿ ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿ, ಆಕೆಯ ಪಾಲಕರೊಂದಿಗೆ ಸೇರಿಸಿದ್ದಾರೆ.
ಪರೀಕ್ಷೆ ಫಲಿತಾಂಶ ಪ್ರಕಟವಾದ ಬಳಿಕ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ತನ್ನ ಪುತ್ರಿಯನ್ನು ಇಂದೋರ್‌ನ ದೇವಸ್ಥಾನದ ಬಳಿಯಿಂದ ಯಾರೋ ಅಪಹರಿಸಿದ್ದಾರೆ ಎಂದು ವಿದ್ಯಾರ್ಥಿನಿಯ ತಂದೆ ಕಳೆದ ಶುಕ್ರವಾರ ರಾತ್ರಿ ಠಾಣೆಗೆ ತೆರಳಿ ದೂರು ನೀಡಿದ್ದರು. ದೂರುದಾರರನ್ನು ವಿಚಾರಿಸಿದಾಗ ಪುತ್ರಿ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿ, ಇಂದೋರ್‌ನಲ್ಲಿ ಅಪಹರಣಕ್ಕೊಳಗಾಗಿರುವುದಾಗಿ ತಿಳಿಸಿದ್ದಾಗಿ ಮಾಹಿತಿ ನೀಡಿದ್ದರು ಎಂದು ಬಂಗಾಂಗ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಜೇಂದ್ರ ಸೋನಿ ಹೇಳಿದ್ದಾರೆ.
ಕಾಲೇಜಿನಿಂದ ದೇವಸ್ಥಾನದವರೆಗೆ ಶಿಕ್ಷಕರೊಬ್ಬರು ಬೈಕ್‌ನಲ್ಲಿ ಕರೆತಂದು ಬಿಟ್ಟಿದ್ದರು. ಅಲ್ಲಿಂದ ಆಟೋ ರಿಕ್ಷಾವೊಂದನ್ನು ಹತ್ತಿದೆ. ಈ ವೇಳೆ ಚಾಲಕ ಏಕಾಂತ ಸ್ಥಳಕ್ಕೆ ಕರೆದೊಯ್ದು, ಬಾಯಿಗೆ ಬಟ್ಟೆ ಕಟ್ಟಿ ಪ್ರಜ್ಞಾಹೀನಳಾಗಿ ಮಾಡಿ ಅಪಹರಣ ಮಾಡಿದ್ದಾನೆ ಎಂದು ವಿದ್ಯಾರ್ಥಿನಿ ತನ್ನ ತಂದೆಗೆ ಕರೆ ಮಾಡಿ ಹೇಳಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.
ವಿದ್ಯಾರ್ಥಿನಿ ಅಪಹರಣವಾದ ಪ್ರದೇಶದ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ವೇಳೆ ಉಜ್ಜಯಿನಿಯ ರೆಸ್ಟೋರೆಂಟ್ ಒಂದರಲ್ಲಿ ವಿದ್ಯಾರ್ಥಿನಿ ಒಬ್ಬಳೇ ಕುಳಿತಿರುವ ಬಗ್ಗೆ ಮಾಹಿತಿ ದೊರಕಿದೆ. ಬಳಿಕ ಬಾಲಕಿಯನ್ನು ಇಂದೋರ್‌ಗೆ ಕರೆತಂದು ಆಕೆಯ ಬ್ಯಾಗ್ ಪರಿಶೀಲಿಸಿದಾಗ, ಅದರಲ್ಲಿ ಇಂದೋರ್-ಉಜ್ಜಯಿನಿ ಬಸ್ ಟಿಕೆಟ್ ಮತ್ತು ರೆಸ್ಟೋರೆಂಟ್‌ನ ಬಿಲ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.