ಲೈಂಗಿಕ ಕಿರುಕುಳವನ್ನು ಪ್ರತಿರೋಧಿಸಿದ ಬಾಲಕಿ: ಡೀಸೆಲ್ ಸುರಿದು ಹತ್ಯೆ
Wednesday, May 17, 2023
ಲಖನೌ: ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳು ಮಹಿಳೆಯರ ಮೇಲಿನ ಕಿರುಕುಳ ತಪ್ಪಿಸಲು ಏನೇ ಕಾನೂನು ಜಾರಿಗೊಳಿಸಿದರೂ ಬಾಲಕಿಯರು, ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇದೀಗ ಉತ್ತರಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಮೇಲಾಗುತ್ತಿರುವ ಲೈಂಗಿಕ ಕಿರುಕುಳವನ್ನು ವಿರೋಧಿಸಿದ ಬಾಲಕಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ನಡೆದಿದೆ.
ಬಾಲಕಿಯ ತಂದೆ-ತಾಯಿ ಕೆಲಸದ ನಿಮಿತ್ತ ಹೊರಹೋಗಿದ್ದರು. ಆಕೆಯ ಇಬ್ಬರು ಸಹೋದರರನ್ನು ಮನೆಯಲ್ಲಿ ಬಿಟ್ಟು ಹೊರ ಹೋಗಿದ್ದರು. ಇದನ್ನು ಗಮನಿಸಿದ ಆರೋಪಿಗಳು ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾರೆ. ಈ ವೇಳೆ ಸಹಾಯಕ್ಕಾಗಿ ಕೂಗಿಕೊಂಡ ಆಕೆ ಕೃತ್ಯವನ್ನು ಪ್ರತಿರೋಧಿಸಿದ್ದಾಳೆ.
ಇದರಿಂದ ಕುಪಿತಗೊಂಡ ಆರೋಪಿಗಳು ಆಕೆಯ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಬೆಂಕಿ ಹತ್ತಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ನೆರೆಹೊರೆಯವರ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಕೆ ತೀವ್ರವಾದ ಸುಟ್ಟ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಘಟನೆಯ ಸಂಬಂಧ ಬಾಲಕಿಯ ಸಹೋದರರು ನೀಡಿರುವ ಹೇಳಿಕೆಯನ್ನು ಆಧರಿಸಿ ನೆರೆಮನೆಯ ನಿವಾಸಿ ಅಬ್ಬಿತ್ ಕುಮಾರ್ ಎಂಬಾತನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳೆದ ಕೆಲ ದಿನಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಆರೋಪಿ ಮಂಗಳವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ಕೃತ್ಯ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.