-->
ಮೂರು ಮಕ್ಕಳಿದ್ದ ಒಂಟಿ ವೃದ್ಧೆಯ ಹತ್ಯೆಗೈದು ದರೋಡೆ: ಪ್ರಕರಣ ಬೇಧಿಸಲು ಐದು ತಂಡ ರಚನೆ

ಮೂರು ಮಕ್ಕಳಿದ್ದ ಒಂಟಿ ವೃದ್ಧೆಯ ಹತ್ಯೆಗೈದು ದರೋಡೆ: ಪ್ರಕರಣ ಬೇಧಿಸಲು ಐದು ತಂಡ ರಚನೆ


ಬೆಂಗಳೂರು: ಒಂಟಿಯಾಗಿ ವಾಸವಿದ್ದ ಮೂರು ಮಕ್ಕಳ ವೃದ್ಧತಾಯಿ ಶನಿವಾರ ತಮ್ಮ ಮನೆಯ ಕೋಣೆಯಲ್ಲಿ ಕೊಲೆಗೈದ ರೀತಿಯಲ್ಲಿ ಮೃತದೇಹವಾಗಿ ಪತ್ತೆಯಾದ ಪ್ರಕರಣ ಮಹಾಲಕ್ಷ್ಮೀ ಬಡಾವಣೆಯ ನಾಗಪುರದಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವಿಶೇಷ ತಂಡಗಳನ್ನು ಪೊಲೀಸರು ರಚಿಸಿ ತನಿಖೆ ನಡೆಸುತ್ತಿದ್ದಾರೆ.

ಮಹಾಲಕ್ಷ್ಮೀ ಬಡಾವಣೆ ನಿವಾಸಿ ಕಮಲಮ್ಮ (82) ಎಂಬವರನ್ನು ದುಷ್ಕರ್ಮಿಗಳು ಶನಿವಾರ ರಾತ್ರಿ ಕೈ, ಕಾಲು ಕಟ್ಟಿ ಹಾಕಿ ಹತ್ಯೆಗೈದು, ಮೈಮೇಲಿದ್ದ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. 

ಈ ಪ್ರಕರಣದಲ್ಲಿ ಮಹತ್ವದ ಸುಳಿವು ದೊರಕಿದೆ. ಆರೋಪಿಗಳ ಸುಳಿವು ಪಥತೆಯಾಗಿದೆ. ಘಟನೆ ನಡೆದಿರುವ ಸ್ಥಳದ ಸಮೀಪದಲ್ಲಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲಿಸಿದಾಗ ಕೆಲವೊಂದು ಮಾಹಿತಿ ಸಿಕ್ಕಿದೆ. ಅದರ ಆಧಾರದ ಮೇಲೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಮಲಮ್ಮ ಅವರಿಗೆ ಮೂವರು ಮಕ್ಕಳಿದ್ದು, ಈ ಪೈಕಿ ಪುತ್ರ ಗುರುಪ್ರಸಾದ್ ವಿವಾಹವಾಗಿ ಪತ್ನಿ ಮತ್ತು ಮಕ್ಕಳೊಂದಿಗೆ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದಾರೆ. ಇಬ್ಬರು ಪುತ್ರಿಯರು ವಿವಾಹವಾಗಿ ಬೇರೆಡೆ ವಾಸವಾಗಿದ್ದಾರೆ. ಕಮಲಮ್ಮರೊಂದಿಗೆ ಪತಿ 2022ರ ಅಕ್ಟೋಬರ್‌ನಲ್ಲಿ ಮೃತಪಟ್ಟಿದ್ದರು. ಬಳಿಕ ಕಮಲಮ್ಮನವರೊಬ್ಬರೇ ನಾಗಪುರದ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ನೆರೆಹೊರೆಯವರು ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಕೊನೆಯ ಬಾರಿ ಕಮಲಮ್ಮ ಅವರನ್ನು ನೋಡಿದ್ದರು. ಆದರೆ ಆ ಬಳಿಕ ರಾತ್ರಿ 7 ಗಂಟೆಯಾದರೂ ಕಮಲಮ್ಮನವರ ಮನೆಯಲ್ಲಿ ಲೈಟ್ ಹಾಕದೆ ಕತ್ತಲಿನಲ್ಲಿ ಇರುವುದನ್ನು ಗಮನಿಸಿ ಅನುಮಾನಗೊಂಡ ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. 

ಮಲಗುವ ಕೋಣೆಯಲ್ಲಿ ಕಮಲಮ್ಮ ಮೃತದೇಹ ಪತ್ತೆಯಾಗಿದೆ. ದುಷ್ಕರ್ಮಿಗಳು ಅವರ ಕೈ ಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆಗೈದಿದ್ದರು. ಬಳಿಕ ಅವರ ಮೈ ಮೇಲಿದ್ದ ಚಿನ್ನದ ಸರ ಹಾಗೂ ಬಳೆಗಳು ಸೇರಿ ಸುಮಾರು 60 ಗ್ರಾಂ ಆಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂತಕರು ಬಲ ಪ್ರಯೋಗಿಸಿ ಮನೆಯೊಳಗೆ ಹೋಗಿಲ್ಲ. ಬದಲಿಗೆ ಕಮಲಮ್ಮನವರಿಂದಲೇ ಬಾಗಿಲು ತೆಗೆಸಿಕೊಂಡು ಒಳ ಹೋಗಿ ಕೃತ್ಯ ಎಸಗಿರುವ ಶಂಕೆಯಿದೆ. ಕಮಲಮ್ಮ ಒಬ್ಬರೇ ಮನೆಯಲ್ಲಿ ವಾಸವಾಗಿರುವ ಸಂಗತಿ ತಿಳಿದಿದ್ದ ಪರಿಚಿತ ವ್ಯಕ್ತಿಗಳೇ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಮನೆಯ ಸುತ್ತಮುತ್ತ ಇರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿ ಆಧರಿಸಿ ತನಿಖೆ ಮುಂದುವರಿಸಿದ್ದೇವೆ. ಜತೆಗೆ, ಕಮಲಮ್ಮ ಮೊಬೈಲ್ ಕರೆಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದೇವೆ. ಕಮಲಮ್ಮ ಅವರ ಮನೆಕೆಲಸದಾಕೆಯನ್ನು ವಿಚಾರಣೆ ನಡೆಸಿದ್ದೇವೆ. ಹಂತಕರ ಬಗ್ಗೆ ಮಹತ್ವದ ಸುಳಿವು ದೊರಕಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article