ಕಾಸರಗೋಡು: ಪ್ರೇಯಸಿಯನ್ನು ಲಾಡ್ಜ್ ಗೆ ಕರೆದು ಬರ್ಬರವಾಗಿ ಕೊಲೆಗೈದ ಪ್ರಿಯಕರ
Wednesday, May 17, 2023
ಕಾಸರಗೋಡು: ತನ್ನ ಪ್ರೇಯಸಿಯನ್ನೇ ಬರ್ಬರವಾಗಿ ಕೊಲೆಗೈದ ಪ್ರಿಯಕರ ಪೊಲೀಸರಿಗೆ ಶರಣಾದ ಘಟನೆ ಕಾಸರಗೋಡಿನ ಕಾಞಂಗಾಡ್ ನಲ್ಲಿ ನಡೆದಿದೆ.
ಉದುಮ ಮಾಂಗಾಡ್ ನಿವಾಸಿ ದೇವಿಕಾ(34) ಕೊಲೆಯಾದ ಯುವತಿ. ಬೋವಿಕ್ಕಾನ ನಿವಾಸಿ ಸತೀಶ್ ಭಾಸ್ಕರ್(36) ಕೊಲೆಗೈದ ಪಾಪಿ ಪ್ರಿಯಕರ.
ದೇವಿಕಾ ಬ್ಯೂಟಿಶಿಯನ್ ಆಗಿದ್ದರೆ, ಸತೀಶ್ ಭಾಸ್ಕರ್ ಈತ ಕಾಞಂಗಾಡ್ ನ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಕೆಲಸ ನಿರ್ವಹಿಸುತ್ತಿದ್ದ. ಇಬ್ಬರೂ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಆದರೆ ಇತ್ತೀಚೆಗೆ ಇಬ್ಬರ ಕುಟುಂಬದವರ ನಡುವೆ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ದೇವಿಕಾ ವಿರುದ್ಧ ಸತೀಶ್ ಭಾಸ್ಕರ್ ನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಮೇಲ್ಪರಂಬ ಠಾಣಾ ಪೊಲೀಸರು ಎರಡು ಕುಟುಂಬದವರನ್ನು ಕರೆದು ಮಾತುಕತೆ ನಡೆಸಿದ್ದರು.
ಸತೀಶ್ ಕಳೆದ ಒಂದು ವಾರದಿಂದ ವಸತಿಗೃಹವೊಂದರಲ್ಲಿ ವಾಸವಾಗಿದ್ದ. ಮಂಗಳವಾರ ಮಧ್ಯಾಹ್ನ ದೇವಿಕಾಳನ್ನು ವಸತಿಗೃಹಕ್ಕೆ ಕರೆಸಿಕೊಂಡು ಕೊಲೆ ಮಾಡಿದ್ದಾನೆ. ಕೊಲೆಯ ಬಳಿಕ ಈಕೆಯ ಪ್ರಿಯಕರ ಹೊಸದುರ್ಗ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.