ಯಕ್ಷಧ್ರುವ ಪಟ್ಲ ಸಂಭ್ರಮ-2023ಕ್ಕೆ ವೈಭವದ ತೆರೆ: ಗಣ್ಯರಿಗೆ ಸನ್ಮಾನ, ರಿಷಭ್ ಶೆಟ್ಟಿ ಪಂಚಿಂಗ್ ಡೈಲಾಗ್‌ಗೆ ಫಿದಾ !!
ಯಕ್ಷಧ್ರುವ ಪಟ್ಲ ಸಂಭ್ರಮ-2023ಕ್ಕೆ ವೈಭವದ ತೆರೆ: ಗಣ್ಯರಿಗೆ ಸನ್ಮಾನ, ರಿಷಭ್ ಶೆಟ್ಟಿ ಪಂಚಿಂಗ್ ಡೈಲಾಗ್‌ಗೆ ಫಿದಾ !!
'ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್' ಸಾರಥ್ಯದಲ್ಲಿ "ಯಕ್ಷಧ್ರುವ ಪಟ್ಲ ಸಂಭ್ರಮ-2023" ಸಮಾರೋಪ ಸಮಾರಂಭ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು.
ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪೇಜಾವರ ಅಧೋಕ್ಷಜ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ, "ಪಟ್ಲ ಸತೀಶ್ ಶೆಟ್ಟಿ ತಮ್ಮ ಕಂಠಸಿರಿಯ ಮೂಲಕ ಮಾತ್ರ ಸಮಾಜವನ್ನು ರಂಜಿಸಿದ್ದಲ್ಲ. ಸಾಮಾಜಿಕ ಸಂಘಟನೆಯನ್ನು ಸ್ಥಾಪಿಸಿ ಆ ಮೂಲಕ ಸಮಾಜದ ನೊಂದವರ, ಅಶಕ್ತರ ಕಣ್ಣೀರು ಒರೆಸುತ್ತಿದ್ದಾರೆ. ಕೆಲವರಿಗೆ ದಾನ ಮಾಡುವ ಸಾಮರ್ಥ್ಯ ಇರುತ್ತದೆ. ಇನ್ನೂ ಕೆಲವರಿಗೆ ತಮಗೆ ದಾನ ಮಾಡುವ ಸಾಮರ್ಥ್ಯ ಇಲ್ಲದಿದ್ದರೂ ಹತ್ತು ಮಂದಿಯಿಂದ ದಾನ ಕೊಡಿಸುತ್ತಾರೆ. ಮತ್ತೂ ಕೆಲವರು ತಾವೂ ದಾನ ಮಾಡುತ್ತಾರೆ ಇತರರಿಂದಲೂ ಕೊಡಿಸುತ್ತಾರೆ. ಇನ್ನೂ ಕೆಲವರಿಗೆ ಈ ಎಲ್ಲಾ ಸಾಮರ್ಥ್ಯವಿರುತ್ತದೆ. ಅಂತಹ ವಿಶೇಷ ಗುಣ ಪಟ್ಲ ಸತೀಶ್ ಶೆಟ್ಟಿ ಅವರಲ್ಲಿದೆ. ಅವರ ಸಮಾಜಮುಖಿ ಕಾರ್ಯ ನಿರಂತರ ಮುಂದುವರಿಯಲಿ" ಎಂದು ಹೇಳಿದರು.
ವೇದಿಕೆಯಲ್ಲಿ ಯಕ್ಷಗಾನ ರಂಗದ ಐದು ದಶಕಗಳ ಹಿರಿಯ ಸಾಧಕ ಪ್ರೊ. ಎಂ.ಎಲ್. ಸಾಮಗ-ಪ್ರತಿಭಾ ಸಾಮಗ ದಂಪತಿಗೆ "ಪಟ್ಲ ಪ್ರಶಸ್ತಿ-2023" ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, "ನನಗೆ ಸನ್ಮಾನ, ಗೌರವಕ್ಕೆ ಮುಖ್ಯ ಕಾರಣ ನನ್ನ ತಂದೆಯವರ ಆಶೀರ್ವಾದ. ಹಿಂದೆ ಕಲಾವಿದರಿಗೆ ಆಶ್ರಯ ನೀಡುವ ದಾನಿಗಳ ಸಂಖ್ಯೆ ಕಡಿಮೆಯಿತ್ತು. ಆದರೆ ಇಂದು ಕಲಾವಿದರ ನೆರವಿಗೆ ಸಾಕಷ್ಟು ಸಂಖ್ಯೆಯಲ್ಲಿ ದಾನಿಗಳಿದ್ದಾರೆ. ಪಟ್ಲ ಫೌಂಡೇಶನ್ ನ ಈ ಸಾರ್ಥಕ ಕಾರ್ಯ ಇದೇ ರೀತಿ ಮುಂದುವರಿಯಲಿ. ಹಣವನ್ನು ಕೂಡಿಡಬಾರದು ಅದನ್ನು ಯೋಗ್ಯರಿಗೆ ದಾನ ಮಾಡಬೇಕು, ಆಸ್ತಿಯನ್ನು ಬೇಕಾದಷ್ಟು ಉಳಿಸಿ ಸಮಾಜಕ್ಕೆ ಅರ್ಪಿಸಬೇಕು ಆಗ ಭಗವಂತನ ಅನುಗ್ರಹವಿರುತ್ತದೆ" ಎಂದು ಹೇಳಿದರು.
MRG ಗ್ರೂಪ್ ಸ್ಥಾಪಕ ಕೆ.ಪ್ರಕಾಶ್ ಶೆಟ್ಟಿ, ಆಶಾ ಪ್ರಕಾಶ್ ಶೆಟ್ಟಿ ದಂಪತಿಯನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಪ್ರಕಾಶ್ ಶೆಟ್ಟಿ, "ಇದೊಂದು ಪವಿತ್ರವಾದ ಅರ್ಥಪೂರ್ಣವಾದ ವೇದಿಕೆಯಾಗಿದೆ. ಪಟ್ಲ ಸತೀಶ್ ಶೆಟ್ಟಿ ಅವರು ಪಾವಂಜೆ ಮೇಳ ಸ್ಥಾಪಿಸುವ ಸಂದರ್ಭದಲ್ಲಿ ದೇವಿಯನ್ನು ಕುಳ್ಳಿರಿಸುವ ತೊಟ್ಟಿಲು ಬೇಕು ಅಂತ ಕೇಳಿದ್ರು. ನಾನು ಹಿಂದೆ ಮುಂದೆ ಯೋಚನೆ ಮಾಡದೇ ಕೊಟ್ಟೆ. ಅಂದಿನಿಂದ ನನಗೂ ಸತೀಶ್ ಪಟ್ಲರಿಗೂ ದೇವಿಯ ಸಂಪೂರ್ಣ ಅನುಗ್ರಹವಾಯಿತು ಎಂದೇ ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಮಾತು ಮುಂದುವರಿಸಿದ ಐಕಳ ಹರೀಶ್ ಶೆಟ್ಟಿ ಅವರು, "ದುಡಿಮೆಯಲ್ಲಿ ಅಲ್ಪ ಭಾಗವನ್ನು ಸಮಾಜದಲ್ಲಿ ನೊಂದವರ ಕಣ್ಣೀರು ಒರೆಸಲು ಬಳಸುತ್ತಿರುವ ಪಟ್ಲ ಸತೀಶ್ ಶೆಟ್ಟಿಯವರು ಸ್ಥಾಪಿಸಿರುವ ಪಟ್ಲ ಫೌಂಡೇಶನ್ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಯಕ್ಷ ಕಲಾವಿದರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಘಟನೆಗೆ ಇನ್ನಷ್ಟು ನೆರವು ನೀಡಲು ಭಗವಂತ ನಮ್ಮಲ್ಲಿ ಶಕ್ತಿ ತುಂಬಲಿ" ಎಂದು ಹೇಳಿದರು.
ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಮಾತಾಡುತ್ತಾ, "ಪಟ್ಲ ಫೌಂಡೇಶನ್ ಸಮಾಜದಲ್ಲಿ ನೊಂದವರಿಗೆ, ಅಶಕ್ತರಿಗೆ, ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ನೀಡುತ್ತಾ ಬಂದಿದೆ. ಈ ಮೂಲಕ ಪಟ್ಲ ಸಂಭ್ರಮಕ್ಕೆ ಹೆಚ್ಚಿನ ಮೌಲ್ಯ ದೊರೆತಂತಾಗಿದೆ. ಇಂದು ಯಕ್ಷಗಾನ ಕಲಾವಿದರಿಗೆ ಯಾರೂ ಇಲ್ಲ ಎಂಬ ಚಿಂತೆಯಿಲ್ಲ. ಅವರಿಗಾಗಿ ಪಟ್ಲ ಸತೀಶ್ ಶೆಟ್ಟಿಯಂತಹ ಹೃದಯ ಶ್ರೀಮಂತಿಕೆಯ ಮನುಷ್ಯ ಇದ್ದಾರೆ. ಪಟ್ಲ ಫೌಂಡೇಶನ್ ನ ಸಾರ್ಥಕ ಕಾರ್ಯಕ್ರಮ ನಿತ್ಯ ನಿರಂತರವಾಗಿ ಮುಂದುವರಿಯಲಿ" ಎಂದು ಹೇಳಿದರು.
ವೇದಿಕೆಯಲ್ಲಿ ಪೇಜಾವರ ಯತಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಅರೆಸ್ಸೆಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಅನಿವಾಸಿ ಉದ್ಯಮಿ ಪ್ರವೀಣ್ ಶೆಟ್ಟಿ ವಕ್ವಾಡಿ, ಅನಿವಾಸಿ ಉದ್ಯಮಿ ಹರೀಶ್ ಶೇರಿಗಾರ್, ನಟ ರಿಷಭ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ ಗುತ್ತು, ಉಳ್ತೂರು ಮೋಹನ್ ದಾಸ್ ಶೆಟ್ಟಿ, ಆದರ್ಶ್ ಶೆಟ್ಟಿ, ನಾರಾಯಣ ಶೆಟ್ಟಿ ಪುಣೆ, ಪಟ್ಲ ಫೌಂಡೇಶನ್ ಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ಅಶೋಕ್ ಶೆಟ್ಟಿ ಬೆಳ್ಳಾಡಿ, ಸಿಎ ಸುಭಾಷ್ಚಂದ್ರ, ವಸಂತ ಶೆಟ್ಟಿ, ವೇಣುಗೋಪಾಲ್ ಶೆಟ್ಟಿ ಮುಂಬೈ, ಪ್ರವೀಣ್ ಭೋಜ ಶೆಟ್ಟಿ, ಅಡ್ಯಾರ್ ದಿವಾಕರ್ ಶೆಟ್ಟಿ, ಪಟ್ಲಗುತ್ತು ಮಹಾಬಲ ಶೆಟ್ಟಿ, ವಸಂತ ಗಿಳಿಯಾರ್, ವಸಂತ ಶೆಟ್ಟಿ ದೆಹಲಿ, ಪ್ರದೀಪ್ ಆಳ್ವ ಕದ್ರಿ, ರವಿಚಂದ್ರ ಶೆಟ್ಟಿ ಅಶೋಕನಗರ, ಮಹಿಳಾ ಘಟಕದ ಆರತಿ ಆಳ್ವ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.
ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.