ಮೋದಿ ಅಬ್ಬರಕ್ಕೆ ಬ್ರೇಕ್ ಹಾಕಿದ ಕರ್ನಾಟಕ ಫಲಿತಾಂಶ!- ಪ್ರಧಾನಿ ಹುದ್ದೆಗೆ ರಾಹುಲ್ ಸೂಕ್ತ ಎಂದ ಸಿದ್ದರಾಮಯ್ಯ
ಕರ್ನಾಟಕದಲ್ಲಿ ಮತ್ತೆ ಆಡಳಿತಕ್ಕೆ ಏರುವ ಅವಕಾಶದಿಂದ ಬಿಜೆಪಿ ವಂಚಿತವಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಇದ್ದ ಏಕೈಕ ರಾಜ್ಯವನ್ನು ಬಿಜೆಪಿ ಕಳೆದುಕೊಂಡಿದೆ.
ಬಿಜೆಪಿಯು ಮೋದಿ, ಅಮಿತ್ ಶಾ ಹೆಸರಲ್ಲೇ ಈ ಚುನಾವಣೆಯನ್ನು ಎದುರಿಸಿತ್ತು. ಡಬ್ಬಲ್ ಎಂಜಿನ್ ಸರ್ಕಾರ ಎಂದೇ ಬಿಂಬಿಸಿದ ಈ ಎಲೆಕ್ಷನ್‌ನಲ್ಲಿ ಅಮಿತ್ ಶಾ ಮತ್ತು ಮೋದಿ ಜೋಡಿ ಸರಿ ಸುಮಾರು 100ಕ್ಕೂ ಹೆಚ್ಚು ರೋಡ್ ಶೋ, ಭಾಷಣ, ರಾಲಿಯನ್ನು ಉದ್ದೇಶಿಸಿ ಮಾತನಾಡಿದ್ದರು. ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಇದಕ್ಕೆ ಸಾಥ್ ನೀಡಿದ್ದರು.
ಇಷ್ಟಾಗಿಯೂ ಚುನಾವಣೆಯಲ್ಲಿ ಪರಿಣಾಮ ಬೀರುವಲ್ಲಿ ಮೋದಿ, ಅಮಿತ್ ಶಾ ಜೋಡಿ ಎಡವಿದೆ. ಬಿಜೆಪಿ ಟುಸ್ ಪಟಾಕಿಯಂತಾಗಿದೆ. 1999ರ ಬಳಿಕ ಇದೇ ಮೊದಲ ಬಾರಿಗೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ರಾಜ್ಯದಲ್ಲಿ ಪುಟಿದೆದ್ದಿದೆ.
ಇದು ರಾಷ್ಟ್ರ ರಾಜಕಾರಣದಲ್ಲೂ ಪ್ರಭಾವ ಬೀರದೇ ಇರದು. ದಕ್ಷಿಣ ಭಾರತದಲ್ಲಿ ಇದ್ದ ಏಕೈಕ ಹಾಗೂ ದೊಡ್ಡ ರಾಜ್ಯವನ್ನು ಬಿಜೆಪಿ ಕಳೆದುಕೊಂಡಿರುವುದು ಗಮನಾರ್ಹ ಸಂಗತಿ. ಇದು ಮುಂದಿನ ವರ್ಷ ನಡೆಯಲಿರುವ ಮಹಾ ಚುನಾವಣೆಯಲ್ಲಿ ಪರಿಣಾಮ ಬೀರದೇ ಇರದು.
ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಮಾತ್ರವಲ್ಲ. ಆಪರೇಷನ್ ಕಮಲಕ್ಕೇ ಆಪರೇಷನ್ ಮಾಡಿಬಿಟ್ಟಿದೆ. ಜೆಡಿಎಸ್ ಹಾಗೂ ಇತರರ ಹಂಗು ಇಲ್ಲದೆ ಏಕೈಕ ಸಾಮರ್ಥ್ಯದಿಂದ ಸರ್ಕಾರ ನಡೆಸುವ ತಾಕತ್ತು, ಜನಬೆಂಬಲ ಗಳಿಸಿದೆ.
ಪ್ರಧಾನಿ ಹುದ್ದೆಗೆ ರಾಹುಲ್ ಸೂಕ್ತ ಅಭ್ಯರ್ಥಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಮಹಾ ಚುನಾವಣೆಗೆ ತೊಡೆ ತಟ್ಟಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ರಣೋತ್ಸಾಹ ಮೊಳಗಿದೆ. ಮೋದಿ ಪಾಳಯಕ್ಕೆ ಇದು ಆತಂಕದ ಸಂಕೇತ.
.