ಮಾಡೆಲ್ ಮೇಲೆ ಅತ್ಯಾಚಾರ, ಮತಾಂತರಕ್ಕೆ ಯತ್ನ: “ದಿ ಕೇರಳ ಸ್ಟೋರಿ” ಸಿನಿಮಾ ನೋಡಿದ ಸಂತ್ರಸ್ತೆಯಿಂದ ದೂರು
Wednesday, May 31, 2023
ಮುಂಬಯಿ: ತನ್ನನ್ನು ಮದುವೆಯಾಗುವುದಾಗಿ ಆಮಿಷವೊಡ್ಡಿ ಅತ್ಯಾಚಾರವೆಸಗಿ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಆರೋಪಿಸಿ 23ವರ್ಷದ ಮಾಡೆಲ್ ಒಬ್ಬರು ಮಾಡೆಲಿಂಗ್ ಏಜೆನ್ಸಿ ಮಾಲಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮುಂಬೈ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತನ್ವೀರ್ ಅಖ್ತರ್ ಲೇಕ್ ಖಾನ್ (40) ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಆತನ ಬಂಧನವಾಗಿಲ್ಲ.
“ದಿ ಕೇರಳ ಸ್ಟೋರಿ” ಸಿನಿಮಾ ನೋಡಿದ ಬಳಿಕ 23 ವರ್ಷದ ಯುವತಿ ತಾನು ಈ ಬಗ್ಗೆ ಪೊಲೀಸ್ ಠಾಣೆ ಹತ್ತುವಂತೆ ಪ್ರೇರೇಪಣೆಗೊಂಡಿದ್ದೆ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ತಾನು 2020ರಲ್ಲಿ ತನ್ವೀರ್ ಅಖ್ತರ್ ಲೇಕ್ ಖಾನ್ ಮಾಡೆಲಿಂಗ್ ಏಜೆನ್ಸಿಗೆ ಸೇರಿಕೊಂಡಿದ್ದೇನೆ. ಆರಂಭದಲ್ಲಿ ಆತ ತನ್ನ ಹೆಸರನ್ನು ಯಶ್ ಎಂದು ಹೇಳಿದ್ದ. ನಾಲ್ಕು ತಿಂಗಳ ಬಳಿಕ ಆತನ ನಿಜವಾದ ಹೆಸರು ತನ್ವೀರ್ ಎಂದು ತಿಳಿಯಿತು. ಆದರೆ ಅದಕ್ಕಿಂತ ಮೊದಲೇ ಆತ ತನ್ನೊಂದಿಗೆ ಸಂಬಂಧ ಬೆಳೆಸಿದ್ದ. ಆರೋಪಿ ತನ್ನನ್ನು ರಾಂಚಿಗೆ ಕರೆದೊಯ್ದು ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಲು ಆರಂಭಿಸಿದ್ದ. ಮುಂಬೈನಲ್ಲಿದ್ದಾಗ ತನ್ನನ್ನು ಕೊಲ್ಲಲು ಯತ್ನಿಸಿದ್ದ ಎಂದು ಆಕೆ ಆರೋಪಿಸಿದ್ದಾರೆ.
ವರ್ಸೋವಾ ಪೊಲೀಸರು ಅತ್ಯಾಚಾರ ಹಾಗೂ ಇತರ ಅಪರಾಧಗಳಿಗೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ. ಬಳಿಕ ಆಪಾದಿತ ಘಟನೆಯು ರಾಂಚಿಯಲ್ಲಿ ನಡೆದಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಂಚಿ ಪೊಲೀಸರಿಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈತನ್ಮಧ್ಯೆ, ಆರೋಪಿಯು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸಮರ್ಥನೆಗಾಗಿ ವಿಡಿಯೋವನ್ನು ಬಿಡುಗಡೆ ಮಾಡಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾನೆ. ಆದರೆ ದೂರುದಾರೆ ತನ್ನ ನಗ್ನ ಫೋಟೋಗಳನ್ನು ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಗೆ ರವಾನಿಸಲು ಡಾಟಾವನ್ನು ಕದಿಯಲು ಯತ್ನಿಸಿದ್ದ ಎಂದು ದೂರುದಾರೆ ಆರೋಪಿಸಿದ್ದಾರೆ.