ಪುತ್ತೂರು: ಜೈಲಿನಿಂದಲೇ ಚುನಾವಣೆ ಎದುರಿಸಿದ ಶಾಫಿ ಬೆಳ್ಳಾರೆ ಪಡೆದ ಮತವೆಷ್ಟು ಗೊತ್ತೇ?
Saturday, May 13, 2023
ಪುತ್ತೂರು: ಬಿಜೆಪಿಯ ಭದ್ರಕೋಟೆ ಎನಿಸಿರುವ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪ್ರಬಲ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದರು. ಅದೇ ರೀತಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಎನ್ಐಎ ತನಿಖೆಯಿಂದ ಜೈಲು ಪಾಲಾಗಿರುವ ಶಾಫಿ ಬೆಳ್ಳಾರೆ ಜೈಲಿನಿಂದಲೇ ಚುನಾವಣೆ ಎದುರಿಸಿದ್ದರು.
ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ ಕೇವಲ 2,788 ಮತ ಪಡೆದು ಅಷ್ಟಕ್ಕೆ ತೃಪ್ತಿಪಡಬೇಕಾಯಿತು. ಈ ಮೂಲಕ ಅವರು ನಾಲ್ಕನೇ ಸ್ಥಾನ ಪಡೆಯುವಂತಾಯಿತು. ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಬಿಜೆಪಿಯ ಭದ್ರಕೋಟೆಯಾಗಿರುವ ಪುತ್ತೂರಿನಲ್ಲಿಯೇ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇದಕ್ಕೆ ಕಾರಣ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ. ಅವರು ಈ ಬಾರಿ ಪುತ್ತೂರು ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಪುತ್ತಿಲರಿಗೆ ಟಿಕೆಟ್ ನೀಡದೆ ಮಹಿಳಾ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡರಿಗೆ ಟಿಕೆಟ್ ನೀಡಿತ್ತು. ಇದರಿಂದ ರೊಚ್ಚಿಗೆದ್ದ ಅರುಣ್ ಕುಮಾರ್ ಪುತ್ತಿಲ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಪ್ರಬಲ ಪೈಪೋಟಿಯನ್ನು ನೀಡಿದ್ದರು.
ಆದರೆ ಪುತ್ತಿಲ ಅವರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಎದುರು 4149 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ. ಪುತ್ತಿಲ ಸ್ಪರ್ಧೆಯಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.